ನಾಳೆ ಭಾರತ-ಆಸ್ಟ್ರೇಲಿಯ ಅಂತಿಮ ಏಕದಿನ ಪಂದ್ಯ
4-1 ಗೆಲುವಿನೊಂದಿಗೆ ಸರಣಿ ಕೊನೆಗೊಳಿಸಲು ಕೊಹ್ಲಿ ಆಶಯ

ನಾಗ್ಪುರ, ಸೆ.30: ನಾಲ್ಕನೆ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿರುವ ಟೀಮ್ ಇಂಡಿಯಾ ನಾಗ್ಪುರದಲ್ಲಿ ರವಿವಾರ ನಡೆಯಲಿರುವ ಆಸ್ಟ್ರೇಲಿಯ ವಿರುದ್ಧದ ಐದನೆ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿಗೆ ಪ್ರಯತ್ನ ನಡೆಸಲಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಆಸ್ಟ್ರೇಲಿಯ 21 ರನ್‌ಗಳ ಸೋಲುಣಿಸಿತ್ತು. ಆಸ್ಟ್ರೇಲಿಯ ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಸರಣಿಯಲ್ಲಿ ಮೊದಲ ಯಶಸ್ಸು ಸಾಧಿಸಿದೆ.
ಸರಣಿ ಗೆಲುವಿನ ಬೆನ್ನಲ್ಲೇ ತಂಡದಲ್ಲಿ ಬದಲಾವಣೆ ಮಾಡಲು ಹೊರಟ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಕೈಸುಟ್ಟುಕೊಂಡಿದ್ದಾರೆ. ಭಾರತ ಸತತ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿ 10ನೆ ಗೆಲುವಿನ ಪ್ರಯತ್ನದಲ್ಲಿ ಎಡವಿದೆ. ಮೊದಲ ಗೆಲುವು ದಾಖಲಿಸಿದ ಆಸ್ಟ್ರೇಲಿಯ ಇನ್ನೊಂದು ಗೆಲುವಿನೊಂದಿಗೆ ಸರಣಿ ಸೋಲಿನ ಅಂತರವನ್ನು 3-2ಕ್ಕೆ ಇಳಿಸಲು ಯೋಚಿಸುತ್ತಿದೆ.
ಭಾರತದ ಮೂವರು ಬೌಲರ್‌ಗಳಾದ ಮುಹಮ್ಮದ್ ಶಮಿ. ಉಮೇಶ್ ಯಾದವ್ ಮತ್ತು ಅಕ್ಷರ್ ಪಟೇಲ್ ದುಬಾರಿ ರನ್ ಬಿಟ್ಟುಕೊಟ್ಟಿದ್ದರು. ಇದರಿಂದಾಗಿ ಆಸ್ಟ್ರೇಲಿಯವು ಭಾರತಕ್ಕೆ ಸರಣಿಯಲ್ಲಿ ಮೊದಲ ಬಾರಿ ಗೆಲುವಿಗೆ 335 ರನ್‌ಗಳ ಕಠಿಣ ಸವಾಲು ವಿಧಿಸಿತ್ತು. ಭಾರತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 313 ರನ್ ಗಳಿಸಿತ್ತು.
ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 334 ರನ್ ಗಳಿಸಿತ್ತು. ಸರಣಿಯಲ್ಲಿ ಆಸ್ಟ್ರೇಲಿಯದ ದಾಂಡಿಗರು ಮೊದಲ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ರವಿವಾರದ ಪಂದ್ಯದಲ್ಲೂ ಕೊಹ್ಲಿ ಅವರು ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್ ಮತ್ತು ಕುಲ್‌ದೀಪ್ ಯಾದವ್ ಅವರನ್ನು ಕಣಕ್ಕಿಳಿಸುವ ಮೂಲಕ ಪ್ರಯೋಗ ಮುಂದುವರಿಸುವ ಯೋಜನೆಯಲ್ಲಿದ್ದಾರೆ.
ಉಮೇಶ್‌ಯಾದವ್(10-0-71-4)ಯಶಸ್ವಿಯಾದರು. ಅದರೆ, ಇವರ ಜೊತೆ ಸರಣಿಯಲ್ಲಿ ಮೊದಲ ಬಾರಿ ಆಡಿದ್ದ ಮುಹಮ್ಮದ್ ಶಮಿ(10-1-62-0)ಕೈ ಸುಟ್ಟುಕೊಂಡಿದ್ದರು. ಅಂತಿಮ ಪಂದ್ಯದಲ್ಲಿ ಲೋಕೇಶ್ ರಾಹುಲ್‌ಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ. ಅವರು ಸರಣಿಯಲ್ಲಿ ಒಂದು ಪಂದ್ಯವನ್ನೂ ಆಡಿಲ್ಲ.
ಏಕದಿನ ಸರಣಿಯ ಬಳಿಕ ಮೂರು ಟ್ವೆಂಟಿ-20 ಪಂದ್ಯಗಳ ಸರಣಿ ಅ.7ರಂದು ಆರಂಭಗೊಳ್ಳಲಿದೆ. ಇದಕ್ಕೂ ಮೊದಲು ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವಿನೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಉಭಯ ತಂಡಗಳು ನೋಡುತ್ತಿವೆ.
ಕಳೆದ ಪಂದ್ಯದಲ್ಲಿ ಭಾರತದ ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟದ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ ಮಧ್ಯಮ ಸರದಿಯ ವೈಫಲ್ಯ ತಂಡವನ್ನು ಸೋಲಿನ ದವಡೆಗೆ ದೂಡಿತ್ತು.
ಹಾರ್ದಿಕ್ ಪಾಂಡ್ಯರಿಗೆ ಇಂದೋರ್ ಪಂದ್ಯದಲ್ಲಿ ನಾಲ್ಕನೆ ಕ್ರಮಾಂಕದಲ್ಲಿ ಭಡ್ತಿ ನೀಡಿ ಬ್ಯಾಟಿಂಗ್‌ಗೆ ಕಳುಹಿಸಲಾಗಿತ್ತು. ಪಾಂಡೆ ತಮಗೆ ಎದುರಾದ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದರು. ಆದರೆ ಕಳೆದ ಪಂದ್ಯದಲ್ಲಿ ಅವರು ಚೆನ್ನಾಗಿ ಆಡಿದ್ದರೂ, ಹಿಂದಿನಂತೆ ಮಿಂಚಲಿಲ್ಲ.
ಪಾಂಡ್ಯಗೆ ಭಡ್ತಿ ನೀಡಿದ್ದ ಹಿನ್ನೆಲೆಯಲ್ಲಿ ಧೋನಿ ಕ್ರಮಾಂಕ ಬದಲಾಗಿ ಅವರ ಬ್ಯಾಟಿಂಗ್‌ಗೆ ಅಡ್ಡಿ ಉಂಟಾಗಿತ್ತು. ಒತ್ತಡದ ಪರಿಸ್ಥಿತಿಯಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸಿ ತಂಡಕ್ಕೆ ನೆರವು ನೀಡುವ ಧೋನಿ ಕಳೆದ ಪಂದ್ಯದಲ್ಲಿ ಕ್ರೀಸ್‌ಗೆ ಆಗಮಿಸಿದಾಗ ಪಂದ್ಯ ಬಹುತೇಕ ಕೈ ತಪ್ಪಿ ಹೋಗಿತ್ತು. ಧೋನಿಗೆ ಮ್ಯಾಚ್ ಫಿನಿಶಿಂಗ್ ಆಟ ಸಾಧ್ಯವಾಗಲಿಲ್ಲ. ಅವರು ಬೇಗನೆ ಔಟಾದರು.
ಮನೀಷ್ ಪಾಂಡೆ ತವರಿನಲ್ಲಿ ಮಿಂಚಲಿಲ್ಲ. 33 ರನ್ ಗಳಿಸಿದರು. ಪಾಂಡೆ ಮತ್ತು ಜಾಧವ್ 5ನೆ ವಿಕೆಟ್‌ಗೆ 61 ರನ್ ಜಮೆ ಮಾಡಿದ್ದರು.
4ನೆ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಮತ್ತು ಕೇದಾರ್ ಜಾಧವ್ 78 ರನ್‌ಗಳ ಜೊತೆಯಾಟ ನೀಡಿದ್ದರು. ಕೇದಾರ್ ಜಾಧವ್ (67) ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದರು. ರಹಾನೆ (53) ಮತ್ತು ರೋಹಿತ್ ಶರ್ಮ(65) ಅರ್ಧಶತಕ ದಾಖಲಿಸಿದ್ದರು.
ಆಸ್ಟ್ರೇಲಿಯ ತಂಡ ಈ ಹಿಂದೆ ಗೆಲುವಿನ ಪ್ರಯತ್ನ ನಡೆಸಿದ್ದರೂ, ಗೆಲುವಿನ ಹೊಸ್ತಿಲಿನಲ್ಲಿ ಎಡವಿತ್ತು. ಕಳೆದ ಪಂದ್ಯದಲ್ಲಿ ಸಂಘಟಿತ ಪ್ರಯತ್ನದ ಮೂಲಕ ಗೆಲುವಿನ ನಗೆ ಬೀರಿತ್ತು.
ಆಸ್ಟ್ರೇಲಿಯದ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ (124) 100ನೆ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ್ದರು. ಮೂರನೆ ಪಂದ್ಯದಲ್ಲಿ ಶತಕ ಸಿಡಿಸಿದ್ದ ಆ್ಯರೊನ್ ಫಿಂಚ್ (94) ಶತಕ ವಂಚಿತಗೊಂಡಿದ್ದರು. ಮೊದಲ ವಿಕೆಟ್‌ಗೆ ವಾರ್ನರ್ ಮತ್ತು ಆ್ಯರೊನ್ ಫಿಂಚ್ 35 ಓವರ್‌ಗಳಲ್ಲಿ 231 ರನ್ ಗಳಿಸುವ ಮೂಲಕ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಇದರಿಂದಾಗಿ ಆಸ್ಟ್ರೇಲಿಯದ ಸ್ಕೋರ್ 330ರ ಗಡಿ ದಾಟಿತ್ತು.
ಆಸ್ಟ್ರೇಲಿಯದ ನಾಯಕ ಸ್ಮಿತ್ 7 ಮಂದಿ ಬೌಲರ್‌ಗಳನ್ನು ದಾಳಿಗಿಳಿಸಿದ್ದರು. ಈ ಪೈಕಿ ರಿಚರ್ಡ್ಸನ್ (58ಕ್ಕೆ 3), ಕೌಲ್ಟರ್ ನೀಲ್(59ಕ್ಕೆ 2), ಪ್ಯಾಟ್ ಕಮಿನ್ಸ್(59ಕ್ಕೆ 1) ಮತ್ತು ಆ್ಯಡಮ್ ಝಾಂಪ (63ಕ್ಕೆ 1) ಯಶಸ್ವಿಯಾಗಿದ್ದರು.
ಗ್ಲೆನ್ ಮ್ಯಾಕ್ಸ್‌ವೆಲ್ ವೈಫಲ್ಯದ ಕಾರಣದಿಂದ ಕಳೆದ ಪಂದ್ಯದಲ್ಲಿ ಆಡುವ ಅವಕಾಶ ಕಳೆದು ಕೊಂಡಿದ್ದರು. ಅಂತಿಮ ಪಂದ್ಯದಲ್ಲಿ ಅವರು ಅಂತಿಮ ಹನ್ನೊಂದರಲ್ಲಿ ಅವಕಾಶ ಪಡೆಯುವ ವಿಚಾರ ದೃಢಪಟ್ಟಿಲ್ಲ. ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಪೀಟರ್ ಹ್ಯಾಂಡ್ಸ್‌ಕಂಬ್ (43) ಚೆನ್ನಾಗಿಆಡಿದ್ದರು. ಈ ಕಾರಣ ದಿಂದಾಗಿ ಅವರಿಗೆ ಇನ್ನೊಂದು ಅವಕಾಶ ಸಿಗುವ ಸಾಧ್ಯತೆ ಇದೆ.
< ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಮನೀಷ್ ಪಾಂಡೆ, ಕೇದಾರ್ ಜಾಧವ್, ಎಂ.ಎಸ್.ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲ್‌ದೀಪ್ ಯಾದವ್, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್ ಬುಮ್ರಾ, ಲೋಕೇಶ್ ರಾಹುಲ್, ರವೀಂದ್ರ ಜಡೇಜ, ಉಮೇಶ್ ಯಾದವ್ ಮತ್ತು ಮುಹಮ್ಮದ್ ಶಮಿ.
<ಆಸ್ಟ್ರೇಲಿಯ: ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಹಿಲ್ಟನ್ ಕಾರ್ಟ್‌ರೈಟ್, ಮಾಥ್ಯೂ ವೇಡ್(ವಿಕೆಟ್ ಕೀಪರ್), ನಥಾನ್ ಕೌಲ್ಟರ್ ನೀಲ್, ಪ್ಯಾಟ್ ಕಮಿನ್ಸ್, ಆ್ಯರೊನ್ ಫಿಂಚ್, ಜೇಮ್ಸ್ ಫಾಕ್ನರ್, ಪೀಟರ್ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯಡಮ್ ಝಾಂಪ, ಕೇನ್ ರಿಚರ್ಡ್ಸನ್, ಮಾರ್ಕಸ್ ಸ್ಟೋನಿಸ್ ಮತ್ತು ಆ್ಯರೊನ್ ಫಿಂಚ್.
<ಪಂದ್ಯದ ಸಮಯ: ಮಧ್ಯಾಹ್ನ 1:30ಕ್ಕೆ ಆರಂಭ







