ಸಯಾಟಿಕಾ ಕಾಡುತ್ತಿದೆಯೇ...? ಇಲ್ಲಿದೆ ಪರಿಣಾಮಕಾರಿ ಮನೆಮದ್ದು
ಸಯಾಟಿಕಾ ಅಥವಾ ಕಟಿಸ್ನಾಯು ಶೂಲೆಯು ಕಾಲಿನ ಕೆಳಭಾಗ, ಪ್ರಷ್ಠಗಳು ಮತ್ತು ಬೆನ್ನಿನಲ್ಲಿ ಕಾಣಿಸಿಕೊಳ್ಳುವ ನೋವಾಗಿದೆ. ನಮ್ಮ ಶರೀರದಲ್ಲಿನ ಅತ್ಯಂತ ದಪ್ಪ ಮತ್ತು ದೊಡ್ಡ ನರವಾಗಿರುವ ಸಯಾಟಿಕ್ ನರ ಘಾಸಿಗೊಂಡರೆ ಈ ನೋವು ಕಾಣಿಸಿಕೊಳ್ಳು ತ್ತದೆ. ವೈದ್ಯಕೀಯವಾಗಿ ಸಯಾಟಿಕಾ ರೋಗನಿರ್ಣಯ ಸಾಧ್ಯವಿಲ್ಲವಾದರೂ ವಾಸ್ತವದಲ್ಲಿ ಅದು ಇಂದಿನ ದಿನಗಳಲ್ಲಿಯ ಅತ್ಯಂತ ಸಾಮಾನ್ಯ ವಿಧದ ಬೆನ್ನುನೋವು ಆಗಿದೆ.
ಸಯಾಟಿಕಾದಿಂದ ನರಳುತ್ತಿರುವ ರೋಗಿಗಳಿಗೆ ನೋವಿನ ಜೊತೆಗೆ ಒಂದು ಅಥವಾ ಎರಡೂ ಕಾಲುಗಳಲ್ಲಿ ಮರಗಟ್ಟಿದ ಮತ್ತು ಜುಮ್ಮೆನಿಸುವ ಅನುಭವವೂ ಆಗುತ್ತದೆ. ಈ ಬವಣೆಯನ್ನು ಅನುಭವಿಸುತ್ತಿರುವ ಹೆಚ್ಚಿನ ರೋಗಿಗಳು ನೋವಿನಿಂದ ಪಾರಾಗಲು ಪೇನ್ಕಿಲ್ಲರ್ಗಳು ಅಥವಾ ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇವು ತಾತ್ಕಾಲಿಕ ಉಪಶಮನವನ್ನಷ್ಟೇ ನೀಡುತ್ತವೆ. ದೀರ್ಘಾವಧಿಯ ಪರಿಹಾರ ಕಾಣಲು ಮತ್ತು ನೋವಿನಿಂದ ಸಂಪೂರ್ಣವಾಗಿ ಪಾರಾಗಲು ಪರಿಣಾಮಕಾರಿ ಮನೆಮದ್ದನ್ನು ಬಳಸಬಹುದಾಗಿದೆ.
ಈ ಮನೆಮದ್ದು ತಯಾರಿಕೆಗೆ ಅಗತ್ಯವಾಗಿರುವ ಸಾಮಗ್ರಿಗಳು
ಸಾವಯವ ಹಾಲು 200 ಮಿ.ಲೀ.
ಬೆಳ್ಳುಳ್ಳಿಯ ಎಸಳುಗಳು 4
ಕಚ್ಚಾ ಸಾವಯವ ಜೇನು ರುಚಿಗೆ ತಕ್ಕಷ್ಟು
ಬೆಳ್ಳುಳ್ಳಿಯ ಎಸಳುಗಳನ್ನು ಚೆನ್ನಾಗಿ ಜಜ್ಜಿ ಒಂದು ಸಣ್ಣ ಪಾತ್ರೆಯಲ್ಲಿ ಹಾಕಿ. ಸಣ್ಣ ಉರಿಯಲ್ಲಿ ಅದನ್ನು ಕಾಯಿಸಿ. ಕಾಯಿಸುತ್ತಿರುವಾಗಲೇ ಹಾಲನ್ನು ಸೇರಿಸಿ. ಹಾಲು ಕುದಿಯುವ ತನಕ ಕಾಯಿಸಿ ನಂತರ ಕೆಳಗಿಳಿಸಿ. ಇದನ್ನು ಸೇವಿಸುವಾಗ ಬೆಳ್ಳುಳ್ಳಿಯ ರುಚಿ ಅಹಿತಕರವೆನ್ನಿಸಿದರೆ ಸ್ವಲ್ಪ ಜೇನನ್ನು ಬೆರೆಸಿಕೊಳ್ಳಿ.
ಈ ಮದ್ದನ್ನು ಪ್ರತಿದಿನ ಒಂದು ಬಾರಿ ಸೇವಿಸಿದರೆ ಕೆಲವೇ ದಿನಗಳಲ್ಲಿ ನೋವು ಮಾಯವಾಗುತ್ತದೆ. ಅಲ್ಲದೆ ಬೆಳ್ಳುಳ್ಳಿಯ ಉರಿಯೂತ ನಿರೋಧಕ ಗುಣವು ಸಯಾಟಿಕ್ ನರವು ಬಾತುಕೊಳ್ಳುವುದನ್ನು ಸಹ ತಡೆಯುತ್ತದೆ.