ಬ್ಯಾರಿ ಭಾಷೆಯಲ್ಲೂ ಸಾಹಿತ್ಯ ಕೃಷಿ ಮಾಡಿ: ಆಲಿಕುಂಞಿ ಪಾರೆ
ಮೇಲ್ತೆನೆ ಸಂಘಟನೆಯಿಂದ ಕವಿಗೋಷ್ಠಿ

ಮಂಗಳೂರು, ಅ.1: ಯಾವ ಭಾಷೆ ಮೇಲೂ ಅಲ್ಲ, ಕೀಳೂ ಅಲ್ಲ. ತುಳುನಾಡಿನ ಮಣ್ಣಿನಲ್ಲಿ ಹುಟ್ಟಿ ಬೆಳೆದ ಬ್ಯಾರಿ ಭಾಷೆ ಕೂಡ ಇತರ ಯಾವ ಭಾಷೆಗೂ ಕಡಿಮೆ ಏನೂ ಅಲ್ಲ. ಹಾಗಾಗಿ ಕನ್ನಡ ಮತ್ತಿತರ ಭಾಷೆಯ ಜೊತೆಗೆ ಬ್ಯಾರಿ ಭಾಷೆಯಲ್ಲೂ ಸಾಹಿತ್ಯ ಕೃಷಿ ಮಾಡಿ ಎಂದು ‘ಮೇಲ್ತೆನೆ’ ಸಂಘಟನೆಯ ಅಧ್ಯಕ್ಷ ಆಲಿಕುಂಞಿ ಪಾರೆ ಹೇಳಿದರು.
ಮಂಜನಾಡಿ ಗ್ರಾಮದ ಕಲ್ಕಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ಉಳ್ಳಾಲ ಅಳೇಕಲದ ಸೈಯದ್ ಮದನಿ ಪಿಯು ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ಶಿಬಿರದಲ್ಲಿ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ಶನಿವಾರ ನಡೆದ ‘ಬ್ಯಾರಿ ಕವಿಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಹಿತ್ಯವು ಸುಳ್ಳಿನ ಮೇಲೆ ನಿಲ್ಲದೆ ಸತ್ಯದ ಪರದೆಯ ಮೇಲೆಯೇ ರಚನೆಗೊಳ್ಳಲಿ. ಬರೆಯುವ ತುಡಿತದೊಂದಿಗೆ ಸಾಹಿತ್ಯ ಕೃಷಿ ಮಾಡಿದರೆ ಅದು ಸಾಕಷ್ಟು ಬಲಿಷ್ಠಗೊಳ್ಳಲಿದೆ. ಬ್ಯಾರಿ ಭಾಷೆಯ ಅವನತಿಯಲ್ಲಿಲ್ಲ. ಅದಕ್ಕೂ ಉಜ್ವಲ ಭವಿಷ್ಯವಿದೆ ಎಂಬ ವಿಶ್ವಾಸದೊಂದಿಗೆ ಬ್ಯಾರಿ ಭಾಷೆಯಲ್ಲಿ ಬರೆಯಲು ಮುಂದಾಗ ಬೇಕು ಎಂದು ಆಲಿಕುಂಞಿ ಪಾರೆ ನುಡಿದರು.
ಯುವ ಲೇಖಕ ಇಸ್ಮತ್ ಪಜೀರ್ ಬ್ಯಾರಿ ಸಾಹಿತ್ಯ ಕಮ್ಮಟ ನಡೆಸಿಕೊಟ್ಟರು. ಕವಿಗಳಾದ ಬಶೀರ್ ಅಹ್ಮದ್ ಕಿನ್ಯ, ಇಸ್ಮಾಯೀಲ್ ಟಿ., ನಿಯಾಝ್ ಪಿ., ರಫೀಕ್ ಪಾಣೇಲ, ಬಶೀರ್ ಕಲ್ಕಟ್ಟ, ಆರೀಫ್ ಕಲ್ಕಟ್ಟ ಕವನ ವಾಚಿಸಿದರು.
ಈ ಸಂದರ್ಭ ಎನ್ನೆಸ್ಸೆಸ್ ಚಟುವಟಿಕೆಗಳಲ್ಲಿ ಕ್ರಿಯಾಶೀಲನಾಗಿದ್ದ ಶಿಬಿರಾರ್ಥಿ ಉಮರ್‌ನನ್ನು ಅಭಿನಂದಿಸಲಾಯಿತು. ಮಂಜನಾಡಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಸೈ, ಸದಸ್ಯರಾದ ಅಬ್ಬಾಸ್, ಅಬ್ದುಲ್ ಖಾದರ್, ಉಪನ್ಯಾಸಕ ಅಬ್ದುಲ್ ಅಝೀಝ್, ದೈಹಿಕ ಶಿಕ್ಷಕ ಸಿರಾಜ್ ಕಿನ್ಯ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕೆ.ಬಿ.ಮುಹಮ್ಮದ್, ಉಮ್ಮರ್ ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.







