ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ; ನಾಲ್ವರ ರಕ್ಷಣೆ

ಭಟ್ಕಳ, ಅ.1: ಇಲ್ಲಿನ ತೆಂಗಿನ ಗುಂಡಿ ಸಮುದ್ರ ತೀರ ಬಳಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟು ಪಲ್ಟಿಯಾಗಿದ್ದು ಲಕ್ಷಾಂತರ ರೂ. ಮೌಲ್ಯದ ನಷ್ಟ ಸಂಭವಿಸಿದೆ. ಬೋಟ್ ನಲ್ಲಿದ್ದ ನಾಲ್ವರು ಮೀನುಗಾರರು ಬೇರೊಂದು ಬೋಟ್ ಮೂಲಕ ಸುರಕ್ಷಿತವಾಗಿ ದಡ ಸೇರಿದ್ದಾರೆ.
ದುರ್ಗಾಪರಮೇಶ್ವರಿ ಬೋಟ್ ರವಿವಾರ ಬೆಳಗ್ಗೆ ಮೀನುಗಾರಿಕೆಗೆಂದು ತೆಂಗಿನಗುಂಡಿ ಬಂದರ್ ನಿಂದ ತೆರಳಿದ್ದು ಮಧ್ಯಾಹ್ನ ೨ಗಂಟೆ ವೇಳೆಗೆ ಮೀನುಗಾರಿಕೆ ಪೂರ್ಣಗೊಳಿಸಿ ಮರಳಿ ಬರುವಾಗ ಸಮುದ್ರ ತೀರದ ಬಳಿಯೇ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಕೂಡಲೆ ಬಂದರ್ ನಲ್ಲಿದ್ದ ಇತರ ಮೀನುಗಾರರು ದೋಣಿಯ ಸಹಾಯದಿಂದ ಮುಳುಗುತ್ತಿರುವ ದೋಣಿಯ ಬಳಿಗೆ ಧಾವಿಸಿದ್ದು ಬೋಟಿನಲ್ಲಿದ್ದ ಮಂಜಪ್ಪ ಬೈರೋ ಮೊಗೇರ್, ಕೇಶವ್ ಮೊಗೇರ್, ಉಮೇಶ್ ದೇವಾಡಿಗ, ಮತ್ತು ಪರಮೇಶ್ವರ ದೇವಾಡಿಗ ಎಂಬ ಮೀನುಗಾರರನ್ನು ಸುರಕ್ಷಿತವಾಗಿ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದರಿಂದಾಗಿ ಲಕ್ಷಾಂತರ ರೂ. ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
Next Story





