ಮುಹರ್ರಂ ಆಚರಿಸಿದ ಶಿಯಾ ಮುಸ್ಲಿಮರು
ಬೆಂಗಳೂರು, ಅ.1: ಮುಹರ್ರಂ ಆಚರಣೆ ಹಿನ್ನೆಲೆ ಶಿಯಾ ಮುಸ್ಲಿಮರು ನಗರದಲ್ಲೆಡೆ ಮೆರವಣಿಗೆ ನಡೆಸಿ ಪ್ರವಾದಿ ಇಮಾಮ್ ಹುಸೈನ್ ಅವರನ್ನು ಸ್ಮರಿಸಿದರು.
ರವಿವಾರ ನಗರದ ಜಾನ್ಸನ್ ಮಾರುಕಟ್ಟೆ ಬಳಿಯ ಆಲಿ ಆಸ್ಕರ್ ಮಸೀದಿಯಲ್ಲಿ ಶಿಯಾ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಪ್ಪು ಬಣ್ಣದ ಬಟ್ಟೆ ಧರಿಸಿದ ಸಾವಿರಾರು ಶಿಯಾ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಬಳಿಕ ವಿಶೇಷಾಲಂಕೃತ ಸ್ತಬ್ಧಚಿತ್ರಗಳನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿದರು.
ಸ್ತಬ್ಧಚಿತ್ರಗಳು ಹಾಗೂ ಆರು ಕುದುರೆಗಳಿಗೆ ಕಟ್ಟಿದ್ದ ಹಸಿರು ಬಣ್ಣದ ಬಟ್ಟೆಗಳಿಗೆ ಪುಟ್ಟ ಪುಟ್ಟ ಮಕ್ಕಳನ್ನು ತಾಗಿಸಿದ ಕೆಲ ಪೋಷಕರು ದೇವರೇ ಮಕ್ಕಳಿಗೆ ಒಳಿತು ಮಾಡು ಎಂದು ಬೇಡಿಕೊಂಡರು.
ದೇಹ ದಂಡನೆ: ಸುಮಾರು ನಾಲ್ಕು ತಾಸು ನಡೆದ ಮೆರವಣಿಗೆಯಲ್ಲಿ ಮಕ್ಕಳು, ಯುವಕರು ಮತ್ತು ವೃದ್ಧರು ಸ್ವಯಂ ದೇಹದಂಡನೆ ಮಾಡಿಕೊಂಡರು. ಆಲಿ ದೂಲಾ ಎಂದು ಕೂಗುತ್ತಾ ದಾರಕ್ಕೆ ಕಟ್ಟಿದ್ದ ಬ್ಲೇಡ್‌ಗಳ ಗೊಂಚಲನ್ನು ತಮ್ಮ ಎದೆಗೆ ಹಾಗೂ ಬೆನ್ನಿಗೆ ಬಡಿದುಕೊಂಡ ರಕ್ತ ಹರಿಸಿದರು. ಬಹುತೇಕರ ಎದೆಗೆ ಕೈಗಳಿಂದ ಬಡಿದುಕೊಂಡು ಶೋಕ ಗೀತೆಗಳನ್ನು ಹಾಡಿ ಮೆರವಣಿಗೆಯಲ್ಲಿ ಸಾಗಿದರು.
ವ್ಯಕ್ತಿ ಅಸ್ವಸ್ಥ: ಎದೆ ಭಾಗ ಹಾಗೂ ಬೆನ್ನಿಗೆ ಬ್ಲೇಡ್‌ಗಳಿಂದ ಜೋರಾಗಿ ಬಡಿದುಕೊಂಡಿದ್ದರಿಂದ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದರು. ಬಳಿಕ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು.
ಸಂಚಾರ ದಟ್ಟಣೆ: ನಗರದ ಹೊಸೂರು ರಸ್ತೆಯ ಜಾನ್ಸನ್ ಮಾರುಕಟ್ಟೆಯ ಬಳಿ ಮೆರವಣಿಗೆ ನಡೆದ ಕಾರಣಕ್ಕೆ ಆ ಪ್ರದೇಶದ ಸುತ್ತಮುತ್ತ ಮಧ್ಯಾಹ್ನದಿಂದ ಸಂಚಾರ ನಿರ್ಬಂಧಿಸಲಾಗಿತ್ತು. ಹೀಗಾಗಿ, ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಕಾರ್ಪೊರೇಷನ್ ಬಳಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಇನ್ನೂ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.







