ಐದನೆ ಏಕದಿನ: ಭಾರತಕ್ಕೆ ಭರ್ಜರಿ ಜಯ
ಆಸ್ಟ್ರೇಲಿಯ ವಿರುದ್ಧದ ಸರಣಿ ಗೆದ್ದ ಬ್ಲೂ ಬಾಯ್ಸ್

ನಾಗ್ಪುರ, ಅ.1: ಆಸ್ಟ್ರೇಲಿಯ ವಿರುದ್ಧದ ಐದನೆ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ವಿಸಿಎ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 243 ರನ್‌ಗಳ ಸವಾಲನ್ನು ಪಡೆದ ಭಾರತ ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ ಶತಕ ಮತ್ತು ಅಜಿಂಕ್ಯ ರಹಾನೆ ಅವರ ಅರ್ಧಶತಕದ ನೆರವಿನಲ್ಲಿ 42.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ದಾಖಲಿಸುವ ಮೂಲಕ ಸುಲಭವಾಗಿ ಗೆಲುವಿನ ದಡ ಸೇರಿತು.
ಇದರೊಂದಿಗೆ ಭಾರತ ಐದು ಪಂದ್ಯಗಳ ಏಕದಿನ ಸರಣಿಯನ್ನು 4-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಭಾರತದ ಆರಂಭಿಕ ದಾಂಡಿಗರಾದ ರೋಹಿತ್ ಶರ್ಮ 125 ರನ್ (109ಎ, 11ಬೌ,5ಸಿ) ಮತ್ತು ರಹಾನೆ 61 ರನ್(74ಎ, 7ಬೌ) ಗಳಿಸಿದರು.
ರೋಹಿತ್ ಶರ್ಮ 168ನೆ ಏಕದಿನ ಪಂದ್ಯದಲ್ಲಿ ತನ್ನ 14ನೆ ಶತಕ ದಾಖಲಿಸಿದರು. ರೋಹಿತ್ ಶರ್ಮ ಅವರು 94 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು.
ಶರ್ಮ 32.2ನೆ ಓವರ್‌ನಲ್ಲಿ ಕಮಿನ್ಸ್ ಎಸೆತದಲ್ಲಿ 1 ರನ್ ಗಳಿಸಿ ತನ್ನ ಸ್ಕೋರ್‌ನ್ನು 92ಕ್ಕೆ ಏರಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 6,000 ರನ್‌ಗಳ ಮೈಲುಗಲ್ಲನ್ನು ತಲುಪಿದರು. ಶರ್ಮ ಮತ್ತು ಅಜಿಂಕ್ಯ ರಹಾನೆ ಮೊದಲ ವಿಕೆಟ್‌ಗೆ 124 ರನ್‌ಗಳ ಜೊತೆಯಾಟ ನೀಡಿದರು.
ರಹಾನೆ 41ನೆ ಏಕದಿನ ಪಂದ್ಯದಲ್ಲಿ 13ನೆ ಅರ್ಧಶತಕ (61) ದಾಖಲಿಸಿ ಔಟಾದರು.
ಶತಕ ದಾಖಲಿಸಿದ ರೋಹಿತ್ ಶರ್ಮ ಅವರು ನಾಯಕ ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮುಂದುವರಿಸಿ ಎರಡನೆ ವಿಕೆಟ್‌ಗೆ 99 ರನ್‌ಗಳ ಜೊತೆಯಾಟ ನೀಡಿದರು. ಕೊಹ್ಲಿ 39 ರನ್ ಗಳಿಸಿ ಔಟಾದರು.
ಆ್ಯಂಡಮ್ ಝಾಂಪ ಅವರು 40ನೆ ಓವರ್‌ನಲ್ಲಿ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಕೇದಾರ್ ಜಾಧವ್ ಔಟಾಗದೆ 5 ರನ್ ಮತ್ತು ಮನೀಷ್ ಪಾಂಡೆ ಔಟಾಗದೆ 11 ರನ್ ಗಳಿಸಿದರು.







