‘ಸೂಸೈಡ್ ಲೈಫ್ ಲೈನ್’ ಉದ್ಘಾಟನೆ

ಮಂಗಳೂರು, ಅ. 1: ಮಾನಸಿಕ ಯಾತನೆ ಹಾಗೂ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುವವರನ್ನು ತಡೆಯುವ ಪ್ರಯತ್ನವಾಗಿ ಹಾಗೂ ಅಂತಹವರನ್ನು ಸಂಪರ್ಕಿಸಿ ತುರ್ತಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ನಗರದ ಸುಶೆಗ್ ಚಾರಿಟೇಬಲ್ ಟ್ರಸ್ಟ್‌ನ ಅಂಗ ಸಂಸ್ಥೆಯಾಗಿರುವ ‘ಸೂಸೈಡ್ ಲೈಫ್ ಲೈನ್’ ನ ಉದ್ಘಾಟನೆಯು ಪಾಂಡೇಶ್ವರದ ಫೋರಂ ಫಿಝಾ ಮಾಲ್‌ನಲ್ಲಿ ರವಿವಾರ ನೆರವೇರಿತು.
ನ್ಯೂರೊ ತಜ್ಞ ಡಾ. ಸಿ.ಕೆ.ಬಳ್ಳಾಲ್ ‘ಸೂಸೈಡ್ ಲೈಫ್ ಲೈನ್’ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆತ್ಮಹತ್ಯೆಯಂತಹ ಕಲ್ಪೆನೆಗಳು ಮನಸ್ಸಿನಲ್ಲಿ ಮೂಡಿದಾಗ ಅದನ್ನು ಹೇಗೆ ದೂರ ಮಾಡಬಹುದು ಎಂಬುದರ ಬಗ್ಗೆ ಹೇಳಿದರು. ಖಿನ್ನತೆಗೊಳಗಾಗಿ, ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸುವವರನ್ನು ಸಂಪರ್ಕಿಸಿ ಅವರನ್ನು ಅಂತಹ ಯೋಚನೆಯಿಂದ ದೂರ ಮಾಡುವ ಉದ್ದೇಶವನ್ನಿಟ್ಟು ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಸಂಸ್ಥೆಯ ಟ್ರಸ್ಟಿಗಳಾದ ಲೊರೆಟ್ಟೊ ಪಿಂಟೋ, ಫಾ.ಜಾನ್ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಶನ್ ಮೊಂತೆರೊ ವಂದಿಸಿದರು. ಬ್ರಾನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
‘ಸೂಸೈಡ್ ಲೈಫ್ ಲೈನ್’ ನ ಸೇವೆಯು ದಿನದ 24 ಗಂಟೆಗಳಲ್ಲೂ ಸಾರ್ವಜನಿಕರಿಗೆ ಲಭ್ಯವಿದೆ. ಆತ್ಮಹತ್ಯೆಯ ಭಾವನೆಗಳನ್ನು ಹತ್ತಿಕ್ಕಲು, ಅಂತಹ ಆಲೋಚನೆಯನ್ನು ದೂರ ಮಾಡಿ ಆರೋಗ್ಯವನ್ನು ಕಾಪಾಡುವುದೇ ಸಂಸ್ಥೆಯ ಉದ್ದೇಶವಾಗಿದೆ. ಸಾವರ್ಜನಿಕರು ಸಂಸ್ಥೆಯ ದೂರವಾಣಿ ಸಂಖ್ಯೆ 0824-2983444ನ್ನು ಕರೆ ಮಾಡಿದರೆ ತಕ್ಷಣ ಸ್ಪಂದಿಸುವುದಾಗಿ ಸಂಸ್ಥೆಯ ಟ್ರಸ್ಟಿಗಳು ತಿಳಿಸಿದ್ದಾರೆ.







