ತನಿಖೆಯ ದಿಕ್ಕುತಪ್ಪಿಸಲು ಷಡ್ಯಂತ್ರ: ಅಗ್ನಿಶ್ರೀಧರ್
"ಗೌರಿ ಲಂಕೇಶ್ ನಡತೆಯ ವಿರುದ್ಧ ಹಿಂದುತ್ವವಾದಿಗಳ ಅಪಪ್ರಚಾರ"

ಬೆಂಗಳೂರು, ಅ. 1: ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ಹಿಂದುತ್ವವಾದಿಗಳ ಕೈವಾಡವಿದೆ. ಹೀಗಾಗಿಯೇ ಅವರು ಪ್ರಕರಣದ ತನಿಖೆಯ ಹಾದಿ ತಪ್ಪಿಸಲು ಗೌರಿಯ ನಡತೆಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪತ್ರಕರ್ತ ಅಗ್ನಿ ಶ್ರೀಧರ್ ಆರೋಪಿಸಿದ್ದಾರೆ.
ರವಿವಾರ ನಗರದ ಗಾಂಧಿ ಭನವನದಲ್ಲಿ ರಾಜ್ಯ ಪತ್ರಕರ್ತರ ಸಂಘಟನೆ ಆಯೋಜಿಸಿದ್ದ ‘ಗೌರಿ ಲಂಕೇಶ್‌ರ ನೆನಪು’ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪತ್ರಕರ್ತೆ ಗೌರಿ ಲಂಕೇಶ್ ಯಾರನ್ನು ಕೊಲೆ ಮಾಡಿದವಳಲ್ಲ, ಯಾರಿಂದಲೂ ಹಣ ವಸೂಲಿ ಮಾಡಿದವಳಲ್ಲ, ಅಪರಾಧಿಯೂ ಅಲ್ಲ. ಕೊನೆಯ ದಿನಗಳವರೆಗೂ ಹಿಂದುತ್ವವಾದದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.ಇದೇ ಕಾರಣದಿಂದ ಅವರು ಗುಂಡಿಗೆ ಬಲಿಯಾದರು ಎಂದು ಹೇಳಿದರು.
ಗೌರಿ ಲಂಕೇಶ್ ನೀತಿ ಗೆಟ್ಟವಳು, ಹಣ ವಸೂಲಿ ಮಾಡುತ್ತಿದ್ದಳು ಎಂದು ಕೆಲ ಮಾಧ್ಯಮಗಳಲ್ಲಿ ಮತ್ತು ಜಾಲತಾಣಗಳಲ್ಲಿ ಆಕೆಯ ನಡತೆ ವಿರುದ್ಧ ಇಲ್ಲದ ಹೇಳಿಕೆಗಳನ್ನು ನೀಡಲಾಗುತ್ತಿದೆ. ಈ ಮೂಲಕ ಪ್ರಕರಣದ ತನಿಖೆಯ ಹಾದಿ ತಪ್ಪಿಸಲು ಹಿಂದುತ್ವವಾದಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ವಿಚಾರವಾದಿಗಳ, ಪತ್ರಕರ್ತರ ಹತ್ಯೆಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ತಲೆ ದೂರಿದೆ. ಕೇಂದ್ರ ಸರಕಾರದ ಧೋರಣೆಗಳ ವಿರುದ್ಧ ಜನ ರೋಸಿ ಹೋಗಿದ್ದಾರೆ. ಹೊಟ್ಟೆಯೊಳಗೆ ನಂಗಿಕೊಂಡಿರುವ ಸಿಟ್ಟನ್ನು ಜನರು ಒಂದು ದಿನ ಹೊರಹಾಕಿದ್ದಾಗ ಸಂಭವಿಸುವ ಎಲ್ಲ ಅನಾಹುತಗಳ ಹೊಣೆ ಹೊರಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಸಿದ್ಧರಾಗಬೇಕು ಎಂದು ಎಚ್ಚರಿಸಿದರು.
ಎನ್‌ಎಫ್‌ಐಡಬ್ಲ್ಯು ಅಧ್ಯಕ್ಷೆ ಎ.ಜ್ಯೋತಿ ಮಾತನಾಡಿ, ದೇಶದಲ್ಲಿ ಪ್ರತಿರೋಧದ ಧ್ವನಿಯನ್ನು ಅಡಗಿಸಲು ವಿಚಾರವಂತರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲು ದೇಶದಲ್ಲಿ ಹೊಡಿ, ಬಡಿ ಸಂಸ್ಕೃತಿಗೆ ಪ್ರಚೋಧಿಸಲಾಗುತ್ತಿದೆ ಎಂದು ಹೇಳಿದರು.
ಪತ್ರಕರ್ತೆ ಗೌರಿ ಲಂಕೇಶ್ ಅವರು ಅತ್ಯಂತ ಪ್ರಮಾಣಿಕತೆ ಹೊಂದಿದವರು, ಯಾರ ಬಳಿಯೂ ಹಣವನ್ನು ವಸೂಲು ಮಾಡಿದವರಲ್ಲ.ಆದರೆ ಅವರ ಹತ್ಯೆಯ ಸುತ್ತ ಊಹಾಪೋಹ ಹೇಳಿಕೆಗಳನ್ನು ನೀಡುವ ಮೂಲಕ ಹಂತಕರನ್ನು ರಕ್ಷಿಸಲು ಯತ್ನಿಸಲಾಗುತ್ತಿದೆ ಎಂದರು.
ಭಾರತೀಯ ಪತ್ರಕರ್ತರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ದೇವಲಪಲ್ಲಿ ಅಮರ್ ಮಾತನಾಡಿ, ಪ್ರಧಾನಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ. ಅಭಿಪ್ರಾಯಗಳನ್ನು ಒಪ್ಪದವರಿಂದಲ್ಲೇ ವಿಚಾರವಾದಿಗಳಾದ ಪನ್ಸಾರೆ, ಧಾಬೋಲ್ಕರ್, ಕಲಬುರ್ಗಿ, ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾರತೀಯ ಪತ್ರಕರ್ತರ ಸಂಘಟನೆಯ ಸದಸ್ಯ ಕೆ.ಅಮರ್‌ನಾಥ್, ರಾಜ್ಯ ಪತ್ರಕರ್ತರ ಸಂಘಟನೆಯ ಅಧ್ಯಕ್ಷ ಪಿ.ಭಾಸ್ಕರ್‌ರೆಡ್ಡಿ ಸೇರಿದಂತೆ ಇತರರು ಇದ್ದರು.
ದೇಶದಲ್ಲಿ ಸರಣಿಯಾಗಿ ವಿಚಾರವಾದಿಗಳ ಹತ್ಯೆಗಳಾಗುತ್ತಿವೆ. ಈ ಹತ್ಯೆಗಳ ವಿರುದ್ಧ ನಿರ್ಧಿಷ್ಟ ಸಂಘಟನೆಯ ಕೈವಾಡವಿದೆ ಎಂದು ಅರಿವಿದರೂ ಇನ್ನು ಯಾಕೆ ಗುಂಡು ಹೊಡೆಸಿಕೊಳ್ಳುತ್ತಿರುವ ಸಮುದಾಯ ಒಂದಾಗಿಲ್ಲ.
-ಅಗ್ನಿ ಶ್ರೀಧರ್







