ಆಕರ್ಷಕ ಮಾದರಿ ವಿಮಾನಗಳ ಹಾರಾಟಕ್ಕೆ ಜಿಲ್ಲಾಧಿಕಾರಿ ಚಾಲನೆ
ಮೈಸೂರು, ಅ.1: ನಗರದ ಲಲಿತ್ ಮಹಲ್ ಹೆಲಿಪ್ಯಾಡ್ ನಲ್ಲಿ ಆಕರ್ಷಕ ಮಾದರಿ ವಿಮಾನಗಳು ಪ್ರದರ್ಶನ ನೀಡಿವೆ.
ಮೈಸೂರಿನಲ್ಲಿ ದಸರಾ ಮಹೋತ್ಸವದ ಆಕರ್ಷಣೆಗಳು ಮುಂದುವರಿದಿದ್ದು, ರವಿವಾರ ಲಲಿತಮಹಲ್ ಹೆಲಿಪ್ಯಾಡ್ ನಲ್ಲಿ ಬಣ್ಣಬಣ್ಣದ ಕಿರು ವಿಮಾನ, ಹೆಲಿಕಾಫ್ಟರ್, ಕ್ವಾಡ್ ಕಾಫ್ಟರ್, ಹೆಕ್ಸಾ ಕಾಫ್ಟರ್ ಗಳು ಆಗಸದಲ್ಲಿ ಮಿಂಚಿನ ವೇಗದಲ್ಲಿ ಹಾರಾಡಿದವು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಮೈಸೂರು ಫ್ಲೈಯಿಂಗ್ ಅಸೋಸಿಯೇಶನ್ ರಿಮೋಟ್ ಕಂಟ್ರೋಲ್ ವಿಮಾನ ಹಾರಾಟ ಪ್ರದರ್ಶನ ಆಯೋಜಿಸಲಾಗಿತ್ತು. ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಕಿರು ವೈಮಾನಿಕ ಹಾರಾಟಕ್ಕೆ ಚಾಲನೆ ನೀಡಿದರು.
ಒಂದು ಗಂಟೆಗೂ ಹೆಚ್ಚಿನ ಸಮಯ ಮಾದರಿ ವಿಮಾನ ಹಾರಾಟ ವೀಕ್ಷಿಸಿದರು. ಐಜಿಪಿ ವಿಪುಲ್ ಕುಮಾರ್ ಅವರು ಸಹ ಕಿರು ವಿಮಾನ ಹಾರಾಟ ಪ್ರದರ್ಶನವನ್ನು ವೀಕ್ಷಿಸಿದರು. ಅಸೋಸಿಯೇಶನ್ ಸ್ಥಾಪಕ ಅಧ್ಯಕ್ಷರಾದ ಅರುಣ್ ಕುಮಾರ್ ಅವರ ನೇತೃತ್ವದಲ್ಲಿ ಬೂಮರಿಂಗ್ ಜೆಟ್, ಟರ್ಬೈನ್ ಜೆಟ್, ಎಕ್ಸ್‍ಟ್ರಾ 300, 3ಆ ಏರೊಬಿಕ್, ಹಾಗೂ ಇಲೆಕ್ಟ್ರಿಕ್ ಮತ್ತು ನೈಟ್ರೊ ಮಾದರಿಯ ಹೆಲಿಕಾಫ್ಟರ್ ಗಳನ್ನು ಹಾರಿಸಲಾಯಿತು. ಕಾರ್ಯಕ್ರಮಕ್ಕೆ ಪರಿಣತ ಆರ್.ಸಿ. ಪೈಲೆಟ್ ಗಳಾದ ಅಲೆಕ್ಸ್ ಪ್ರವೀಣ್ 23 ವರ್ಷ ಮತ್ತು ಕಿರಿಯ ಪೈಲೆಟ್ 8 ವರ್ಷ ಶಿವ ಮಿತ್ರನ್ ಅವರು ಭಾಗಿಯಾಗಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೆಶಕ ಎಚ್.ಪಿ. ಜನಾರ್ದನ್, ಸೆಸ್ಕ್ ಜನರಲ್ ಮ್ಯಾನೇಜರ್ ಸತೀಶ್ ಹಾಗೂ ಸಾರ್ವಜನಿಕ ಗ್ರಂಥಾಲಯದ ಉಪನಿರ್ದೆಶಕ ಮಂಜುನಾಥ್ ಅವರು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು. ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರು ಮಾದರಿ ವಿಮಾನ ಹಾರಾಟ ನೋಡಿ ಖುಷಿಪಟ್ಟರು.







