'ಅಪ್ಪನ ಕಾಳಜಿ ಮುಂದುವರಿಸಿಕೊಂಡು ಹೋಗಿದ್ದ ಗೌರಿ ಲಂಕೇಶ್' : ಚಿಂತಕ ಶಿವಸುಂದರ್

ಶಿವಮೊಗ್ಗ, ಸೆ. 1: 'ಲಂಕೇಶ್‍ರವರ ಕಾಳಜಿ, ಆದರ್ಶಗಳನ್ನು ಗೌರಿ ಲಂಕೇಶ್‍ರವರು ಚಾಚೂ ತಪ್ಪದೆ ಪಾಲನೆ ಮಾಡಿಕೊಂಡು ಬಂದಿದ್ದರು. ಅದರಂತೆ ಅವರು ನಡೆದುಕೊಂಡರು' ಎಂದು ಹೋರಾಟಗಾರ, ಪ್ರಗತಿಪರ ಚಿಂತಕ, ಗೌರಿ ಲಂಕೇಶ್‍ರವರ ಒಡನಾಡಿ ಶಿವಸುಂದರ್ ಸ್ಮರಿಸಿದ್ದಾರೆ.
ನಗರದ ಹೊರವಲಯ ಆಲ್ಕೋಳದ ಎಸ್ ಎಮ್ ಎಸ್ ಎಸ್ ಸಭಾಂಗಣದಲ್ಲಿ ರವಿವಾರ ಅಹರ್ನಿಶಿ ಪ್ರಕಾಶನ ಹಾಗೂ ವಿವೇಕ ಸಂಸ್ಥೆ ಆಯೋಜಿಸಿದ್ದ 'ಗೌರಿ ಲಂಕೇಶ್ ನೆನಪು ಮತ್ತು ಪುಸ್ತಕ ಮಾತು' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಂಗ್ಲ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಗೌರಿ ಲಂಕೇಶ್‍ರವರು ತಂದೆ ಲಂಕೇಶ್ ಮರಣ ಹೊಂದಿದ ನಂತರ ತಂದೆಯ ಪತ್ರಿಕೋದ್ಯಮದ ಕಾಯಕ ಮುಂದುವರಿಸಲು ನಿರ್ಧರಿಸಿದರು. ಅದರಂತೆ ಸತತ ಎರಡು ವರ್ಷಗಳ ಕಾಲ ಕನ್ನಡ ಭಾಷೆ ಕಲಿತುಕೊಂಡರು. ಇದಕ್ಕಾಗಿ ಅವಿರತವಾಗಿ ಅಧ್ಯಯನ ನಡೆಸಿದರು. ವ್ಯಾಕರಣದ ಲೋಪದೋಷ ತಿದ್ದಿಕೊಂಡರು. ಸ್ನೇಹಿತರು, ಹಿತೈಷಿಗಳ ಸಹಕಾರ ಪಡೆದುಕೊಂಡರು. ನಾಲ್ಕು ವರ್ಷಗಳ ನಂತರ ಕನ್ನಡ ಭಾಷೆಯಲ್ಲಿ ಸಂಪೂರ್ಣ ಹಿಡಿತ ಹೊಂದಿದರು. ನಮಗೆ ಕನ್ನಡ ಭಾಷೆ, ಬರವಣಿಗೆಯ ಬಗ್ಗೆ ತಿಳಿ ಹೇಳುವ ರೀತಿಯಲ್ಲಿ ಭಾಷಾ ಸಾಮಥ್ರ್ಯ ಮೈಗೂಡಿಸಿಕೊಂಡಿದ್ದರು. ಇದು ಅವರ ಬದ್ದತೆ, ದೃಢ ಮನ ಸ್ಥಿತಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ತಂದೆಯ ಹಾದಿಯಲ್ಲಿ ಅವರು ಮುನ್ನಡೆಯುವ ವೇಳೆ ಆರ್ಥಿಕವಾಗಿ, ರಾಜಕೀಯವಾಗಿ, ಪತ್ರಿಕೋದ್ಯಮದ ಸೇರಿದಂತೆ ನಾನಾ ಕ್ಷೇತ್ರದಲ್ಲಿ ಹತ್ತು ಹಲವು ರೀತಿಯ ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ಈ ಎಲ್ಲ ಸವಾಲುಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸಿ ಮುನ್ನುಗ್ಗಿದರು. ಜೊತೆಗೆ ಇದರಲ್ಲಿ ಯಶಸ್ವಿ ಕೂಡ ಆದರು ಎಂದರು.
ಇದೇ ಸಂದರ್ಭದಲ್ಲಿ ಇರ್ಷಾದ್ ಉಪ್ಪಿನಂಗಡಿಯವರ 'ಸ್ವರ್ಗದ ಹಾದಿಯಲ್ಲಿ', ಜಿ.ಟಿ.ಸತೀಶ್‍ರವರು ಅನುವಾದಿಸಿರುವ ಖ್ಯಾತ ಪತ್ರಕರ್ತ ಅಜಿತ್ ಪಿಳ್ಳೈಯವರ 'ಇದು ಯಾವ ಸೀಮೆಯ ಚರಿತ್ರೆ?' ಎಂಬ ಪುಸ್ತಕಗಳ ಬಗ್ಗೆ ಸಾಹಿತಿ ಭಾನು ಮುಷ್ತಾಕ್ ಮತ್ತು ಎ. ನಾರಾಯಣರವರು ಮಾತನಾಡಿದರು.
ಸಮಾರಂಭದಲ್ಲಿ ಇರ್ಷಾದ್ ಉಪ್ಪಿನಂಗಡಿ, ಜಿ.ಟಿ. ಸತೀಶ್ ಮೊದಲಾದವರಿದ್ದರು.







