ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಕಾಗೋಡು ತಿಮ್ಮಪ್ಪ ಸೂಚನೆ

ಸೊರಬ, ಅ.1: ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ರವಿವಾರ ತಾಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು.
ಈ ವೇಳೆ ಕಾಗೋಡು ತಿಮ್ಮಪ್ಪ ಮಾತನಾಡಿ, ತಾಲೂಕಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ ಚಂದ್ರಗುತ್ತಿಗೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಯಾಗದಂತೆ ಸ್ನಾನ ಗೃಹಗಳು, ಶೌಚಾಲಯಗಳ ನಿರ್ಮಾಣ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಈ ಕೂಡಲೇ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವರದಾ ನದಿ ಸೇತುವೆಯಿಂದ ಚಂದ್ರಗುತ್ತಿಯವರೆಗೆ ದ್ವಿಮುಖರಸ್ತೆ (ಜೋಡಿರಸ್ತೆ), ಗ್ರಾಮಕ್ಕೆ ಮಂಜೂರಾಗಿರುವ ಮುರಾರ್ಜಿ ಶಾಲೆ ಕಾಮಗಾರಿಗೆ 15.5 ಕೋಟಿ ಮಂಜೂರಾಗಿದೆ. ತಕ್ಷಣದಿಂದಲೇ ಕಾಮಗಾರಿ ಪ್ರಾರಂಬಿಸಬೇಕು. ಶಾಶ್ವತ ಕುಡಿಯುವ ನೀರಿಗಾಗಿ ಬ್ಯಾರೆಜ್ ನಿರ್ಮಾಣ ಮಾಡುವುದರಿಂದ ಸೊರಬ ಪಟ್ಟಣ ಹಾಗೂ ಚಂದ್ರಗುತ್ತಿ ಕ್ಷೇತ್ರಕ್ಕೆ ನೀರು ಸರಬರಾಜು ಮಾಡಬಹುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಬ್ಯಾರೇಜ್ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಿ ಕಾಮಗಾರಿ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಮೀನು ಮಂಜೂರಾತಿ ಕೊಡಿಸಿದರೂ ಆಶ್ರಯ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಲ್ಲಿ ವಿಳಂಬ ದೋರಣೆ ಸರಿಯಲ್ಲ. ತಕ್ಷಣ ಪಟ್ಟಣ ಆಶ್ರಯ ಸಮಿತಿ ಸಭೆಯನ್ನು ಕರೆದು ಅಕ್ಟೋಬರ್ 15 ರೊಳಗಾಗಿ ಎಲ್ಲಾ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ವಿತರಿಸುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್, ಪ.ಪಂ. ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ರವಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ತಾಲ್ಲೂಕು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ರಾಜು ಎಂ ತಲ್ಲೂರು ಧಿಡೀರ್ ಪ್ರತ್ಯಕ್ಷರಾದರು. ಆ ಸಂಧರ್ಭದಲ್ಲಿ ಪ್ರತಿಕ್ರಿಯಿಸಿದ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ ರಾಜು ತಲ್ಲೂರು ಮನೆಗೆ ಬಂದು ಕಾಂಗ್ರೆಸ್ ಪಕ್ಷ ಸೇರುವುದಾಗಿ ತಿಳಿಸಿದ್ದರು. ತಾಲ್ಲೂಕಿನಲ್ಲಿ ಪಕ್ಷದ ಸಂಘಟನೆಗೆ ಸೂಚಿಸಿದ್ದೇನೆ ಎಂದು ಹೇಳುವ ಮೂಲಕ ರಾಜು ತಲ್ಲೂರು ಕಾಂಗ್ರೆಸ್ ಸೇರ್ಪಡೆಯ ಸುಳಿವು ನೀಡಿದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಆನವಟ್ಟಿ ಬ್ಲಾಕ್ ಅಧ್ಯಕ ಚೌಟಿ ಚಂದ್ರಶೇಖರ ಪಾಟೀಲ್ ಮಾತನಾಡಿ, ರಾಜು ತಲ್ಲೂರು ಇನ್ನೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಅವರು ರಾಜೀನಾಮೆ ನೀಡಿದ ನಂತರ ಸಂಘಟನೆಯಲ್ಲಿ ಪಾಲ್ಗೊಳ್ಳಲಿ ಎಂದು ಸಚಿವರ ಗಮನಕ್ಕೆ ತಂದರು. ಆಗ ಮಾತನಾಡಿದ ಸಚಿವ ಕಾಗೋಡು ತಿಮ್ಮಪ್ಪ ಅವರು ಸದ್ಯದಲ್ಲೆ ರಾಜಿನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದರು.
ಸಭೆಯಲ್ಲಿ ಸೊರಬ ಬ್ಲಾಕ್ ಅಧ್ಯಕ್ಷ ಜೆ. ಶಿವಾನಂದಪ್ಪ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಚೌಟಿ ಚಂದ್ರಶೇಖರ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್, ಪ.ಪಂ. ಸದಸ್ಯ ಸುಜಾಯತ್ ಉಲ್ಲಾ, ತಾಲ್ಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಗಜಾನನ, ಮುಖಂಡರಾದ ಕೆ.ಮಂಜುನಾಥ ಹಳೇಸೊರಬ, ಜುಲ್ಫೀಕರ್ ಅಹಮ್ಮದ್, ಪಟ್ಟಣ ಆಶ್ರಯ ಸಮಿತಿ ಸದಸ್ಯರಾದ ಇ.ಹೆಚ್. ಮಂಜುನಾಥ್, ಅಹ್ಮದ್ ಶರೀಫ್, ಬಗರ್‍ಹುಕುಂ ಸಮಿತಿ ಸದಸ್ಯ ರಾಯನ್ ಗೋಪಾಲಪ್ಪ, ಕೆ.ಜಿ. ಲೋಲಾಕ್ಷಮ್ಮ ಮತ್ತಿತರರಿದ್ದರು.
ಫೋಟೋ ಸೊರಬ 1-10 : ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳ ಸಭೆ ನಡೆಸಿದರು.







