ಗನ್ ಪಾಯಿಂಟ್ ನಲ್ಲಿ ವೈದ್ಯರನ್ನು ಬೆದರಿಸಿ ಗೆಳೆಯನಿಗೆ ಚಿಕಿತ್ಸೆ ನೀಡಲು ಒತ್ತಾಯಿಸಿದ ಗುಂಪು!

ಪಶ್ಚಿಮ ಬಂಗಾಳ, ಅ.1: ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ನುಗ್ಗಿದ ಗುಂಪೊಂದು ಗನ್ ತೋರಿಸುವ ಮೂಲಕ ವೈದ್ಯರನ್ನು ಬೆದರಿಸಿ ತಮ್ಮ ಗೆಳೆಯನಿಗೆ ತಕ್ಷಣ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಆಸ್ಪತ್ರೆಯ ಸಿಬ್ಬಂದಿಯನ್ನು ನಿಂದಿಸಿ ಹಲ್ಲೆ ನಡೆಸಿದ್ದಲ್ಲದೆ ಆಸ್ಪತ್ರೆಯಲ್ಲಿ ಕೋಲಾಹಲವೆಬ್ಬಿಸಿತ್ತು. ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆ ಸುಮಾರು 6:30ರ ಹೊತ್ತಿಗೆ ಬೈಕ್ ಗಳಲ್ಲಿ ಬಂದ ಗುಂಪು ಆಸ್ಪತ್ರೆಗೆ ನುಗ್ಗಿತ್ತು. ಇವರಲ್ಲಿ ಕೆಲವರು ಐಸಿಯು ವಾರ್ಡ್ ಗೆ ನುಗ್ಗಿ ತಮ್ಮ ಗೆಳೆಯನಿಗೆ ತುರ್ತು ಚಿಕಿತ್ಸೆ ನೀಡುವಂತೆ ಗನ್ ತೋರಿಸಿ ಕರ್ತವ್ಯದಲ್ಲಿದ್ದ ವೈದ್ಯರನ್ನು ಬೆದರಿಸಿತು.
ಈ ಸಂದರ್ಭ ಫಾರ್ಮನ್ನು ತುಂಬಿಸಲು ಹೇಳಿದ್ದಕ್ಕಾಗಿ ಅವರು ರಿಸೆಪ್ಶನಿಸ್ಟ್ ಗೆ ಥಳಿಸಿದ್ದಾರೆ. ಸಿಬ್ಬಂದಿ ಪೊಲೀಸರಿಗೆ ಕರೆ ಮಾಡುವ ಮೊದಲೇ ತಂಡ ಪರಾರಿಯಾಗಿತ್ತು ಎನ್ನಲಾಗಿದೆ.
ಈ ಬಗ್ಗೆ ತನಿಖೆ ನಡೆಯುತ್ತಿದೆ. ಗ್ಯಾಂಗ್ ಗಳ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ಗಾಯಗೊಂಡಿರಬೇಕು. ಆತನನ್ನು ಅವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.





