ಅರುಣಾಚಲ ಗಡಿ ಸಮೀಪ ಹೊಸ ಹೆದ್ದಾರಿ ತೆರೆದ ಚೀನಾ

ಬೀಜಿಂಗ್,ಅ.1: ಟಿಬೆಟ್‌ನ ಪ್ರಾಂತೀಯ ರಾಜಧಾನಿ ಲಾಸಾವನ್ನು , ಅರುಣಾಚಲ ಪ್ರದೇಶದ ಗಡಿ ಸಮೀಪದ ನಿಗಿಂಚಿ ಪಟ್ಟಣದ ಜೊತೆ ಸಂಪರ್ಕಿಸುವ 5.8 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾದ 409 ಕಿ.ಮೀ. ವಿಸ್ತೀರ್ಣದ ನೂತನ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯನ್ನು ಚೀನಾ ರವಿವಾರ ಸಂಚಾರಕ್ಕೆ ಮುಕ್ತಗೊಳಿಸಿದೆ.
ಟಿಬೆಟ್ ಪ್ರಾಂತದ ಪ್ರಮುಖ ಪ್ರವಾಸಿ ಆಕರ್ಷಣೆಯೂ ಆಗಿರುವ ಈ ಎರಡು ಪ್ರಮುಖ ನಗರಗಳನ್ನು 409 ಕಿ.ಮೀ. ವಿಸ್ತೀರ್ಣದ ಈ ಸುಂಕಮುಕ್ತ ಹೆದ್ದಾರಿಯು ಸಂಪರ್ಕಿಸಲಿದೆ.
ಟೆಬೆಟ್‌ನಲ್ಲಿರುವ ಬಹುತೇಕ ಎಕ್ಸ್‌ಪ್ರೆಸ್‌ವೇಗಳನ್ನು ಸೇನಾವಾಹನಗಳ ಸಂಚಾರಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ನಿರ್ಮಿಸಲಾಗಿದೆ. ಈ ಹೆದ್ದಾರಿಯ ನಿರ್ಮಾಣದಿಂದ ಚೀನಿ ಸೇನೆಗೆ ತನ್ನ ಪಡೆಗಳು ಹಾಗೂ ಶಸ್ತ್ರಾಸ್ತ್ರಗನ್ನು ವೇಗವಾಗಿ ಸಾಗಿಸಲು ಸಾಧ್ಯವಾಗಲಿದೆಯೆಂದು ಚೀನಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಅರುಣಾಚಲ-ಟಿಬೆಟ್ ಗಡಿಯ 3488 ಕಿ.ಮೀ. ವಿಸ್ತೀರ್ಣದ ಗಡಿನಿಯಂತ್ರಣ ರೇಖೆಯಲ್ಲಿರುವ ಪ್ರದೇಶದ ಬಗ್ಗೆ ಭಾರತ ಹಾಗೂ ಚೀನಾ ನಡುವೆ ಗಡಿವಿವಾದ ತಲೆದೋರಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂಬುದಾಗಿ ಚೀನಾ ಪ್ರತಿಪಾದಿಸುತ್ತಿದ್ದರೆ, 1962ರ ಯುದ್ಧದಲ್ಲಿ ಚೀನಾವು ಆಕ್ರಮಿಸಿಕೊಂಡ ಅಕ್ಸಾಯಿ ಚೀನಾ ಪ್ರದೇಶವನ್ನು ವಿವಾದಾತ್ಮಕ ಪ್ರದೇಶವೆಂದು ಭಾರತ ವಾದಿಸುತ್ತಿದೆ.





