ಪಾಕ್ ವಿದೇಶಾಂಗ ಸಚಿವ ವಿರುದ್ಧ 100 ದಶಲಕ್ಷ ಡಾಲರ್ ಮಾನನಷ್ಟ ದಾವೆ ಹೂಡಿದ ಹಾಫಿಝ್

ಲಾಹೋರ್,ಅ.1: ತನ್ನನ್ನು ಅಮೆರಿಕದ ‘ಪ್ರಿಯಕರ’ನೆಂದು ವ್ಯಂಗ್ಯವಾಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ವಿರುದ್ದ ಜಮಾತುದ್ದಾವಾ ಗುಂಪಿನ ನಾಯಕ ಹಾಫಿಝ್ ಸಯೀದ್, 100 ದಶಲಕ್ಷ ಡಾಲರ್ ಮಾನನಷ್ಟ ಮೊಕದ್ದಮೆ ಹೂಡಿದ್ದಾನೆ.
ಆಸಿಫ್ ಅವರು ನ್ಯೂಯಾರ್ಕ್‌ನಲ್ಲಿ ಏಶ್ಯ ಸೊಸೈಟಿ ಫೋರಂನಲ್ಲಿ ಮಾಡಿದ ಭಾಷಣದಲ್ಲಿ ಸಯೀದ್, ಹಕ್ಕಾನಿಗಳು ಹಾಗೂ ಲಷ್ಕರ್ ಎ ತೊಯ್ಬಾ ಗುಂಪು ದೇಶಕ್ಕೆ ಹೊರೆಯಾಗಿವೆ. ಆದರೆ ಅವುಗಳನ್ನು ತೊಲಗಿಸಲು ಅಗತ್ಯವಿರುವ ಸಂಪತ್ತನ್ನು ದೇಶ ಹೊಂದಿಲ್ಲವೆಂದು ಹೇಳಿದರು. ಕೇವಲ 20ರಿಂದ 30 ವರ್ಷಗಳ ಹಿಂದೆ, ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿದ್ದ ಉಗ್ರಗಾಮಿ ಗುಂಪುಗಳನ್ನು ಅಮೆರಿಕವು ತನ್ನ ‘ಪ್ರಿಯತಮ’ರಂತೆ ಕಾಣುತ್ತಿತ್ತು. ಈಗ ಅವುಗಳನ್ನು ಮಟ್ಟಹಾಕುವಂತೆ ಅದು ಪಾಕ್ ಮೇಲೆ ಒತ್ತಡ ಹೇರುತ್ತಿದೆಯೆಂದು ಆಸಿಫ್ ಕಟಕಿಯಾಡಿದ್ದರು.
‘‘,ಸಯೀದ್ ಓರ್ವ ಗೌರವಾನ್ವಿತ ಧಾರ್ಮಿಕ ನಾಯಕರಾಗಿದ್ದಾರೆ. ಅವರು ಯಾವತ್ತೂ ಶ್ವೇತಭವನದ ಬಳಿಗೆ ಸುಳಿದಿಲ್ಲ. ಇನ್ನೂ ಅಮೆರಿಕದ ಗಣ್ಯರ ಜೊತೆ ಆಹಾರಕೂಟದಲ್ಲೂ ಪಾಲ್ಗೊಂಡಿಲ್ಲ ಎಂದು ಡೊಗಾರ್ ಅವರು ಆಸಿಫ್ ಅವರಿಗೆ ಕಳುಹಿಸಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಹಾಫೀಝ್ ಸಯೀದ್ ಅವರು ಮದ್ಯ ಸೇವಿಸಿದ್ದಾರೆಂದು ಪಾಕ್ ವಿದೇಶಾಂಗ ಆರೋಪಿಸಿದ್ದಾರೆ. ಹಾಫೀಝ್ ಅವರು ಶ್ರದ್ಧಾವಂತ ಧಾರ್ಮಿಕ ವ್ಯಕ್ತಿಯಾಗಿದ್ದಾರೆ. ಆಸಿಫ್ ಅವರ ನಿಂದನಾತ್ಮಕ ಹೇಳಿಕೆಗಾಗಿ ಪಾಕಿಸ್ತಾನದ ದಂಡಸಂಹಿತೆಯ ಸೆಕ್ಷನ್ 500ರ ಅಡಿ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಬಹುದಾಗಿದೆಯೆಂದು ನ್ಯಾಯವಾದಿ ಡೋಗರ್ ತಿಳಿಸಿದ್ದಾರೆ.
ಹಾಫಿಝ್ ಸಯೀದ್ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿಯೆಂದು ಭಾರತ ಸರಕಾರ ಆರೋಪಿಸಿದ್ದು, ಆತನನ್ನು ತನಗೆ ಹಸ್ತಾಂತರಿಸಬೇಕೆಂದು ಆಗ್ರಹಿಸುತ್ತಿದೆ.
2014ರಲ್ಲಿ ಜೆಯುಡಿಯನ್ನು ಅಮೆರಿಕವು ವಿದೇಶಿ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿತ್ತು. ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಶಾಮೀಲಾದ ಆರೋಪದಲ್ಲಿ ಸಯೀದ್ ತಲೆಗೆ ಅಮೆರಿಕ ಸರಕಾರ ಈಗ 10 ದಶಲಕ್ಷ ಡಾಲರ್‌ಗಳ ಬಹುಮಾನ ಘೋಷಿಸಿದೆ.







