ಇಟಲಿಯಿಂದ ಉ.ಕೊರಿಯ ರಾಯಭಾರಿ ಉಚ್ಚಾಟನೆ

ರೋಮ್, ಅ.1: ಕಿಮ್‌ಜೊಂಗ್ ಉನ್ ಆಡಳಿತ ನಡೆಸುತ್ತಿರುವ ಪರಮಾಣು ಪರೀಕ್ಷೆಗಳು ಹಾಗೂ ಕ್ಷಿಪಣಿ ಉಡಾವಣೆಗಳನ್ನು ಪ್ರತಿಭಟಿಸಿರುವ ಇಟಲಿಯು ಉತ್ತರ ಕೊರಿಯದ ನೂತನ ರಾಯಭಾರಿಯನ್ನು ದೇಶ ಬಿಟ್ಟು ತೆರಳುವಂತೆ ಆದೇಶಿಸಿದೆ.
ಇಟಲಿಯ ವಿದೇಶಾಂಗ ಸಚಿವ ಆ್ಯಂಜೆಲಿನೊ ಅಲ್ಫಾನೊ ರವಿವಾರ ಇಟಲಿಯ ದಿನಪತ್ರಿಕೆ ಲಾ ರಿಪಬ್ಲಿಕಾಗೆ ನೀಡಿದ ಸಂದರ್ಶನವೊಂದರಲ್ಲಿ ಉತ್ತರ ಕೊರಿಯದ ರಾಯಭಾರಿಯನ್ನು ದೇಶಬಿಟ್ಟು ತೆರಳುವಂತೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ. ‘‘ಉತ್ತರ ಕೊರಿಯವು ತನ್ನ ದಾರಿಯನ್ನು ಬದಲಾಯಿಸದೇ ಇದ್ದಲ್ಲಿ ಅದನ್ನು ಏಕಾಂಗಿಯಾಗಿಸುವುದು ಅನಿವಾರ್ಯವಾಗಲಿದೆ ಎಂಬುದನ್ನು ವ್ಯೊಂಗ್‌ಗಾಂಗ್ ಅರಿತುಕೊಳ್ಳುವಂತೆ ಮಾಡಲು ನಾವು ಬಯಸಿದ್ದೇವೆ ’’ ಎಂದು ಆಲ್ಫಾನೊ ಹೇಳಿದ್ದಾರೆ. ಆದಾಗ್ಯೂ ಉತ್ತರ ಕೊರಿಯದ ಜೊತೆ ರಾಜತಾಂತ್ರಿಕ ಬಾಂಧವ್ಯಗಳನ್ನು ಕಡಿದುಕೊಳ್ಳುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಉತ್ತರ ಕೊರಿಯವು ದೀರ್ಘಾವಧಿಯಿಂದ ವಿದೇಶಾಂಗ ಸಚಿವಾಲಯದ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಮುನ್ ಜೊಂಗ್ ನಾಮ್ ಅವರನ್ನು ಇಟಲಿಯ ರಾಯಭಾರಿಯಾಗಿ ಕಳೆದ ಜುಲೈನಲ್ಲಿ ನೇಮಿಸಿತ್ತು.





