ಅಂಕಿತ್ ಭಾವ್ನೆ ಶತಕ: ಭಾರತ ‘ಎ’ ತಂಡಕ್ಕೆ ಮುನ್ನಡೆ

ವಿಜಯವಾಡ, ಅ.1: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಕಿತ್ ಭಾವ್ನೆ ಅಜೇಯ ಶತಕ ಹಾಗೂ ಪಾರ್ಥಿವ್ ಪಟೇಲ್ ಅರ್ಧಶತಕದ ಕೊಡುಗೆಯ(116)ಸಹಾಯದಿಂದ ಭಾರತ ‘ಎ’ ತಂಡ ನ್ಯೂಝಿಲೆಂಡ್ ‘ಎ’ ತಂಡದ ವಿರುದ್ಧ 2ನೆ ಅನಧಿಕೃತ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 360 ರನ್ ಗಳಿಸಿದ್ದು ಭಾರೀ ಮುನ್ನಡೆಯಲ್ಲಿದೆ.
ಭಾವ್ನೆ(ಅಜೇಯ 116, 166 ಎಸೆತ, 13 ಬೌಂಡರಿ, 3 ಸಿಕ್ಸರ್) ಹಾಗೂ ಪಾರ್ಥಿವ್ ಪಟೇಲ್(ಅಜೇಯ 56, 78 ಎಸೆತ, 4 ಬೌಂಡರಿ, 1 ಸಿಕ್ಸರ್) ನಾಲ್ಕನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 156 ರನ್ ಸೇರಿಸಿ ಭಾರತದ ಮುನ್ನಡೆಯನ್ನು 149 ರನ್‌ಗೆ ವಿಸ್ತರಿಸಿದರು. ನ್ಯೂಝಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 211 ರನ್ ಗಳಿಸಿತ್ತು.
ಶ್ರೇಯಸ್ ಅಯ್ಯರ್(82 ರನ್, 79 ಎಸೆತ, 10 ಬೌಂಡರಿ, 2 ಸಿಕ್ಸರ್)ಅರ್ಧಶತಕದ ಕೊಡುಗೆ ನೀಡಿದರು. 2ನೆ ವಿಕೆಟ್‌ಗೆ 133 ರನ್ ಜೊತೆಯಾಟ ನಡೆಸಿದ ಶ್ರೇಯಸ್ ಹಾಗೂ ಪ್ರಿಯಾಂಕ್ ಪಾಂಚಾಲ್(46) ಭಾರತ ‘ಎ’ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು.
ಕಿವೀಸ್ ಸೀನಿಯರ್ ತಂಡದ ಸ್ಪಿನ್ನರ್ ಐಶ್ ಸೋಧಿ 19 ಓವರ್‌ಗಳಲ್ಲಿ 109 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.





