ಅಂಡರ್-17 ವಿಶ್ವಕಪ್: ಭಾರತಕ್ಕೆ ಆಗಮಿಸಿದ ಚಿಲಿ,ಜರ್ಮನಿ ತಂಡ

ಕೋಲ್ಕತಾ, ಅ.1: ಭಾರತದ ಆರು ವಿವಿಧ ನಗರಗಳಲ್ಲಿ ಅ.6 ರಿಂದ ಆರಂಭವಾಗಲಿರುವ ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು 21 ಸದಸ್ಯರನ್ನು ಒಳಗೊಂಡ ಚಿಲಿ ರಾಷ್ಟ್ರೀಯ ತಂಡ ರವಿವಾರ ಕೋಲ್ಕತಾಕ್ಕೆ ಆಗಮಿಸಿದೆ.
ಅರ್ಜೆಂಟೀನದ ಮಾಜಿ ಗೋಲ್‌ಕೀಪರ್ ಹೆರ್ನನ್ ಕಾಪುಟೊರಿಂದ ಕೋಚಿಂಗ್ ಪಡೆಯುತ್ತಿರುವ ಚಿಲಿ ತಂಡ ರವಿವಾರ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ನಗರದ ಹೊಟೇಲ್‌ಗೆ ಪ್ರಯಾಣ ಬೆಳೆಸಿದೆ.
‘ಎಫ್’ ಗುಂಪಿನಲ್ಲಿರುವ ಚಿಲಿ ತಂಡದೊಂದಿಗೆ ಇಂಗ್ಲೆಂಡ್, ಇರಾಕ್ ಹಾಗೂ ಮೆಕ್ಸಿಕೊ ತಂಡಗಳಿವೆ. ಚಿಲಿ ತನ್ನೆಲ್ಲಾ ಗ್ರೂಪ್ ಪಂದ್ಯಗಳನ್ನು ನವೀಕರಣಗೊಂಡಿರುವ ಕೋಲ್ಕತಾದ ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ಆಡಲಿದೆ. ಕೋಲ್ಕತಾದಲ್ಲಿ ಅ.28 ರಂದು ಫೈನಲ್ ಪಂದ್ಯ ನಡೆಯಲಿದೆ.
ಚಿಲಿ ಆಟಗಾರರು ಸೆ.29 ರಂದು ತಡರಾತ್ರಿ ಭಾರತಕ್ಕೆ ಪ್ರಯಾಣ ಬೆಳೆಸಿದ್ದು ರವಿವಾರ ಬೆಳಗ್ಗೆ 8:20ಕ್ಕೆ ಕೋಲ್ಕತಾಕ್ಕೆ ಆಗಮಿಸಿದೆ. ದೀರ್ಘಸಮಯ ವಿಮಾನ ಪ್ರಯಾಣದಲ್ಲೇ ಕಳೆದಿದ್ದ ಚಿಲಿ ಆಟಗಾರರು ರವಿವಾರ ಸಂಜೆಯೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದರು.
ಚಿಲಿ ತಂಡ ಸತತ ನಾಲ್ಕನೆ ಬಾರಿ ಅಂಡರ್-17 ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ. 2015ರಲ್ಲಿ ವಿಶ್ವಕಪ್‌ನ ಆತಿಥ್ಯವಹಿಸಿದ್ದ ಚಿಲಿ ಆ ವಿಶ್ವಕಪ್‌ನಲ್ಲಿ ಅಂತಿಮ-16ರ ಸುತ್ತು ತಲುಪಿತ್ತು.
1993ರಲ್ಲಿ ಜಪಾನ್‌ನಲ್ಲಿ ಚೊಚ್ಚಲ ಕಿರಿಯರ ವಿಶ್ವಕಪ್‌ನ್ನು ಆಡಿದ್ದ ಚಿಲಿ ತಂಡ ಮೊದಲ ವಿಶ್ವಕಪ್‌ನಲ್ಲೇ ಮೂರನೆ ಸ್ಥಾನ ಪಡೆದು ಅಚ್ಚರಿ ಮೂಡಿಸಿತ್ತು. ಅಕ್ಟೋಬರ್ 8 ರಂದು ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ಈ ವರ್ಷ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಗೋವಾ ತಲುಪಿದ ಜರ್ಮನಿ ಫುಟ್ಬಾಲ್ ತಂಡ
ಜರ್ಮನಿಯ ಅಂಡರ್-17 ವಿಶ್ವಕಪ್ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಜಾನ್ ಫಿಯೆಟ್ ಅರ್ಪ್ ಅನುಪಸ್ಥಿತಿಯಲ್ಲಿ ಭಾರತಕ್ಕೆ ಆಗಮಿಸಿದೆ. ಅರ್ಪ್ ಇನ್ನು ಕೆಲವೇ ದಿನಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
20 ಸದಸ್ಯರುಗಳೊಂದಿಗೆ ಜರ್ಮನಿ ತಂಡ ದೋಹಾ ಮಾರ್ಗವಾಗಿ ಕತರ್ ಏರ್‌ಲೈನ್ಸ್ ನಲ್ಲಿ ಗೋವಾಕ್ಕೆ ಬೆಳಗ್ಗೆ 5 ಗಂಟೆಗೆ ಆಗಮಿಸಿತು. ಮಧ್ಯಾಹ್ನದ ವೇಳೆಗೆ ಸಮುದ್ರದ ಬೀಚ್‌ಗೆ ತೆರಳಿ ಅಭ್ಯಾಸವನ್ನು ಆರಂಭಿಸಿದೆ. ಜರ್ಮನಿಯ 17ರ ಹರೆಯದ ಆಟಗಾರ ಅರ್ಪ್ ಮೇನಲ್ಲಿ ನಡೆದಿದ್ದ ಯುಇಎಫ್‌ಎ ಯುರೋಪ್ ಅಂಡರ್-17 ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ಗೋಲು ಬಾರಿಸಿ ಗಮನ ಸೆಳೆದಿದ್ದರು. ಈ ಟೂರ್ನಿಯಲ್ಲಿ ಜರ್ಮನಿ ಸೆಮಿಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಸೋತಿತ್ತು. ಆದರೆ ಅಂಡರ್-17 ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು.
‘ಸಿ’ ಗುಂಪಿನಲ್ಲಿರುವ ಜರ್ಮನಿ ತಂಡ ಕೋಸ್ಟಾರಿಕ, ಇರಾನ್ ಹಾಗೂ ಗಿನಿಯಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಅ.7 ರಂದು ಕೊಸ್ಟಾರಿಕಾ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಜರ್ಮನಿ ಈವರೆಗೆ 9 ಬಾರಿ ಅಂಡರ್-17 ವಿಶ್ವಕಪ್‌ನಲ್ಲಿ ಭಾಗವಹಿಸಿದೆ. 1985ರಲ್ಲಿ ನಡೆದಿದ್ದ ಮೊದಲ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಆಗಿತ್ತು. 2007 ಹಾಗೂ 2011ರಲ್ಲಿ 3ನೆ ಸ್ಥಾನ ಪಡೆದಿತ್ತು. 1997ರಲ್ಲಿ ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಎರಡು ವರ್ಷಗಳ ಹಿಂದೆ ನಡೆದಿದ್ದ ವಿಶ್ವಕಪ್‌ನಲ್ಲಿ ಅಂತಿಮ-16ರ ಸುತ್ತಿನಲ್ಲಿ ಕ್ರೊಯೇಷಿಯ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿತ್ತು.







