ಪ್ರತಿಯೊಬ್ಬರು ಸದೃಢ ದೇಶ ನಿರ್ಮಾಣಕ್ಕೆ ಸಹಕರಿಸಬೇಕು: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್

ಸುಂಟಿಕೊಪ್ಪ, ಅ.2: ಪ್ರತಿಯೊಂದು ಸಮಾಜದವರು ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟಿದ್ದಾರೆ.
ಕಾಜೂರು ಎಸ್‍ಎನ್‍ಡಿಪಿ ಶಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ 3ನೆ ವರ್ಷದ ಓಣಂ ಆಚರಣಾ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಪಾಲಿಸುತ್ತಾ ಮಲೆಯಾಳಿ ಸಮಾಜದ ಉನ್ನತ ಸಂಸ್ಕೃತಿಯನ್ನು ಎಸ್‍ಎನ್‍ಡಿಪಿಯವರು ಪೋಷಿಸಿ ಬೆಳೆಸಿ ಆಟೋಟ ಸ್ಪರ್ಧೆಗಳನ್ನು ನಡೆಸುತ್ತಾ ಸಮಾಜ ಭಾಂದವರು ಒಗ್ಗೂಡುವಿಕೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಮಲೆಯಾಳಿ ಸಮಾಜದ ಸಲಹೆಗಾರ ವಿ.ಎಂ.ವಿಜಯ ಮಾತನಾಡಿ, ಕೇರಳದಲಲ್ಲಿ ರಾಜರ ಆಳ್ವಿಕೆ ಇದ್ದಾಗ ಹಿಂದುಳಿದ ವರ್ಗದವರು, ಶೂದ್ರರು ಜೀವನ ಸಾಗಿಸಲು ಉಸಿರು ಕಟ್ಟುವ ವಾತವರಣದಲ್ಲಿದ್ದಾಗ ಇದರ ವಿರುದ್ಧ ನಾರಾಯಣ ಗುರು ಸಿಡಿದೆದ್ದು ದೇವಾಲಯ ನಿರ್ಮಿಸಿ ತಾವೇ ಪೂಜೆ ಮಾಡಲು ಅವಕಾಶ ಕಲ್ಪಿಸಿದರಲ್ಲದೆ ವಿದ್ಯಾಮಂದಿರ ನಿರ್ಮಿಸಿ ಸಮಾನತೆಗೆ ಅವಕಾಶ ಕಲ್ಪಿಸಿದರು ಎಂದರು.
ಈ ವೇಳೆ ಹಿರಿಯ ಪತ್ರಕರ್ತ ಜಿ.ಕೆ.ಬಾಲಕೃಷ್ಣ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ, ಮಹಿಳೆಯರಿಗೆ ಹಗ್ಗ ಜಗ್ಗಟ, ಪೂಕಳಂ ಸ್ಪರ್ಧೆ, ಪುರುಷರಿಗೆ ಹಗ್ಗ ಜಗ್ಗಟ ಮಕ್ಕಳಿಗೆ ಕಪ್ಪೆ ಜಿಗಿತ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಐಗೂರು ಗ್ರಾಪಂ ಅಧ್ಯಕ್ಷ ಚಂಗಪ್ಪ, ಸೋಮವಾರಪೇಟೆ ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಡಿ.ಪ್ರಕಾಶ್, ತಾಲೂಕು ಪಂಚಾಯತ್ ಸದಸ್ಯೆ ಸಬಿತಾ ಚನ್ನಕೇಶವ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಜೂರು ಶಾಖೆಯ ಎಸ್‍ಎನ್‍ಡಿಪಿ ಉಪಾಧ್ಯಕ್ಷ ಒ.ಆರ್. ಶಶಿ ವಹಿಸಿದ್ದರು. ಎಸ್‍ಎನ್‍ಡಿಪಿ ಕಾರ್ಯದರ್ಶಿ ಎಂ.ಕೆ.ಮೋಹನ ಸ್ವಾಗತಿಸಿ, ಜಿ.ಕೆ.ಅವಿಲಾಶ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಟಿ.ಆರ್. ವಿಜಯ ವಂದಿಸಿರು.







