ಪ್ರಜಾಪ್ರಭುತ್ವದಲ್ಲಿ ಭಿನ್ನ ಧ್ವನಿಗೂ ಅವಕಾಶ: ಡಾ.ರಾಬರ್ಟ್ ಜೋಸ್

ಉಡುಪಿ, ಅ.2: ವಿಚಾರಧಾರೆಗಳ ನಡುವಿನ ವಾಗ್ವಾದದಲ್ಲಿ ಗಾಂಧೀಜಿ ಸರ್ವಾಧಿಕಾರಿಯಾಗದೆ ಭಿನ್ನ ಧ್ವನಿಗೆ ಅವಕಾಶವನ್ನು ಕೊಡುತ್ತಿದ್ದರು. ಯಾವುದೇ ಕೆಲಸ ಶ್ರೇಷ್ಠವೂ ಅಲ್ಲ ನಿಕೃಷ್ಟವೂ ಅಲ್ಲ. ಎಲ್ಲವನ್ನೂ ಸಮಾನತೆಯಿಂದ ಕಾಣ ಬೇಕೆಂಬುದು ಗಾಂಧೀಜಿ ನಿಯಮ ಎಂದು ಬಳ್ಳಾರಿ ವಿಜಯನಗರ ಕೃಷ್ಣದೇವ ರಾಯ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಆರ್ಟ್‌ನ ಡೀನ್ ಡಾ.ರಾಬರ್ಟ್ ಜೋಸ್ ಹೇಳಿದ್ದಾರೆ.
ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಇಂದು ಜರಗಿದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಅಂಬೇಡ್ಕರ್ ಮತ್ತು ಗಾಂದೀಜಿಯವರ ವಿಚಾರಧಾರೆಗಳ ನಡುವೆ ವಾಗ್ವಾದ ಮತ್ತು ಭಿನ್ನತೆ ಇತ್ತು. ಆದರೆ ಅದು ಕೊಡುವ ಅಂತಿಮ ಫಲಿತಾಂಶ ಒಂದೇ ಆಗಿತ್ತು. ಗಾಂಧೀಜಿಗೆ ನೆಹರು ಅವರ ಅಭಿವೃದ್ಧಿ ಕಲ್ಪನೆಯ ಬಗ್ಗೆ ಸಹಮತ ಇರಲಿಲ್ಲ. ಅವರ ದೃಷ್ಟಿಯಲ್ಲಿ ಅಭಿವೃದ್ಧಿ ಎಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೂ ಆಗಬೇಕು. ಇದನ್ನೇ ಅವರು ಸರ್ವೋ ದಯ ಎಂದು ಕರೆದರು ಎಂದರು.ಗಾಂಧೀಜಿಯ ಆಶ್ರಮ ಸೇರಬೇಕಾದರೆ ಮೊದಲು ಶೌಚಾಲಯ ಸ್ವಚ್ಛಗೊಳಿಸಬೇಕಾಗಿತ್ತು. ಗಾಂಧೀಜಿಯವರು ಎಲ್ಲವನ್ನೂ ಶೋಧನೆ ಮಾಡಿ ಕೊನೆಗೆ ನಿರ್ಧಾರಕ್ಕೆ ಬರುತ್ತಿದ್ದರು. ಇಂದಿನ ಸಂದರ್ಭದಲ್ಲಿ ಜನ ಸೂಡೋ ಸ್ಟ್ರಾಂಗ್ ನಾಯಕತ್ವದ ಭ್ರಮೆಯಲ್ಲಿದ್ದಾರೆ. ವಾಸ್ತವದಲ್ಲಿ ಇದು ಒಂದು ದೊಡ್ಡ ಸುಳ್ಳು. ಹೀಗಾಗಿ ಇಂದಿಗೂ ಕೂಡಾ ಗಟ್ಟಿ ನಾಯಕ್ವದ ಗಾಂಧೀಜಿಯ ವಿಚಾರಧಾರೆ ಪ್ರಸ್ತುತವಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಇಂದು ಗಾಂಧೀಜಿ ನಮ್ಮ ಸ್ಮತಿಪಟಲದಿಂದ ಕಣ್ಮರೆಯಾಗುತ್ತಿದ್ದಾರೆ. ಗಾಂಧೀಜಿಯವರನ್ನು ಕೇವಲ ಸ್ವಚ್ಛ ಭಾರತದ ರೂಪಕವಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ನಮ್ಮ ವಿಚಾರಧಾರೆ ಯನ್ನು ಒಪ್ಪದ ವ್ಯಕ್ತಿಗಳ ಬಾಯಿಮುಚ್ಚಿಸುವ ವ್ಯವಸ್ಥೆ ನಡೆಯುತ್ತಿದೆ. ಎಲ್ಲದಕ್ಕೂ ಹಿಂಸೆ ಉತ್ತರವಲ್ಲ. ಕನಸುಗಳಿಲ್ಲದ ದೇಶ ನಾಶವಾಗುತ್ತದೆ ಎಂದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಮೇಶ್ ಆಚಾರ್ಯ, ತಾಪಂ ಸದಸ್ಯೆ ರಜನಿ ಆರ್.ಅಂಚನ್, ಪ್ರಭಾರ ಪ್ರಾಂಶುಪಾಲ ದಿನೇಶ್ ಕುಮಾರ್ ಉಪಸ್ಥಿತರಿ ದ್ದರು. ಮುಖ್ಯ ಶಿಕ್ಷಕಿ ಮೂಕಾಂಬೆ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರ ನಾಯ್ಕಾ ವಂದಿಸಿದರು. ಉಪನ್ಯಾಸಕಿ ಶಾಂತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು.







