ಲಾಸ್‌ವೆಗಾಸ್‌ನಲ್ಲಿ ಗುಂಡಿನ ದಾಳಿ: ಕನಿಷ್ಠ 50 ಜನರ ಸಾವು,200ಕ್ಕೂ ಅಧಿಕ ಜನರಿಗೆ ಗಾಯ

ಲಾಸ್‌ವೆಗಾಸ್,ಅ.2: ಅಮೆರಿಕದಲ್ಲಿ ಮತ್ತೆ ಗುಂಡುಗಳ ಹಾರಾಟ ನಡೆದಿದೆ. ಜೂಜುಪ್ರಿಯರ ಸ್ವರ್ಗವಾಗಿರುವ ಲಾಸ್‌ವೆಗಾಸ್ ಸ್ಟ್ರಿಪ್‌ನಲ್ಲಿ ರವಿವಾರ ರಾತ್ರಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಬಂದೂಕುಧಾರಿಯೋರ್ವ ಹೋಟೆಲ್ಲೊಂದರ ಕಟ್ಟಡದ 32ನೇ ಅಂತಸ್ತಿನಿಂದ ಹಲವಾರು ನಿಮಿಷಗಳ ಕಾಲ ಗುಂಡುಗಳ ಸುರಿಮಳೆಗೈದು ಕನಿಷ್ಠ 50 ಜನರನ್ನು ಬಲಿ ತೆಗೆದುಕೊಂಡಿದ್ದಾನೆ. ಈ ಭೀಭತ್ಸ ಘಟನೆಯಲ್ಲಿ 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಹಂತಕನನ್ನು ಪೊಲೀಸರು ಕೊಂದಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಭೀತಿಯಿದ್ದು, ಇದು ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಮಾರಣಾಂತಿಕ ಸಾಮೂಹಿಕ ಹತ್ಯಾಕಾಂಡ ಘಟನೆಯಾಗಿ ಇತಿಹಾಸದ ಪುಟಗಳನ್ನು ಸೇರಲಿದೆ. ಕಳೆದ ವರ್ಷ ಒಲಾಂಡೊ ನೈಟ್ ಕ್ಲಬ್‌ನಲ್ಲಿ ನಡೆದಿದ್ದ ಶೂಟಿಂಗ್‌ನಲ್ಲಿ 49 ಜನರು ಸಾವನ್ನಪ್ಪಿದ್ದರು.
ಪೊಲೀಸರು ಹಂತಕನನ್ನು ಪತ್ತೆ ಹಚ್ಚಿ ಕೊಲ್ಲಲು ತಡಕಾಡುತ್ತಿದ್ದರೆ ಭಯಭೀತಗೊಂಡಿದ್ದ ಸಾವಿರಾರು ಜನರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದರಿಂದ ನೂಕುನುಗ್ಗಲು ಸಹ ಸಂಭವಿಸಿತ್ತು. ದಾಳಿಯ ನಂತರ ಹಲವಾರು ಸಂಗೀತಪ್ರೇಮಿಗಳು ರಕ್ತ ಅಂಟಿ ಕೊಂಡಿದ್ದ ಬಟ್ಟೆಗಳೊಂದಿಗೆ ಕಂಗಾಲಾಗಿ ರಸ್ತೆಗಳಲ್ಲಿ ಅಲೆದಾಡುತ್ತಿದ್ದುದು ಸಾಮಾನ್ಯ ದೃಶ್ಯವಾಗಿತ್ತು.
ಶಂಕಿತ ಹಂತಕನನ್ನು ಲಾಸ್‌ವೆಗಾಸ್‌ನ ಮೆಸ್ಕಿಟ್ ನಿವಾಸಿ ಸ್ಟೀಫನ್ ಪ್ಯಾಡಕ್(64) ಎಂದು ಗುರುತಿಸಲಾಗಿದ್ದು, ಈತ ಏಕಾಂಗಿಯಾಗಿ ಈ ಹತ್ಯಾಕಾಂಡವನ್ನು ನಡೆಸಿದ್ದಾನೆ. ಈತ ಯಾವುದೇ ಉಗ್ರಗಾಮಿ ಗುಂಪುಗಳೊಂದಿಗೆ ಗುರುತಿಸಿಕೊಂಡಿರಲಿಲ್ಲ ಎಂದು ಲಾಸ್‌ವೆಗಾಸ್ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ ಶೆರೀಫ್ ಜೋಸೆಫ್ ಲಂಬಾರ್ಡೊ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ಯಾಡಕ್‌ನ ಸಂಗಾತಿ, ಏಷ್ಯನ್-ಅಮೆರಿಕನ್ ಮಹಿಳೆ ಮಾರಿಲೊವ್ ಡ್ಯಾನ್ಲೆ(62) ಎಂಬಾಕೆಯನ್ನು ಪತ್ತೆ ಹಚ್ಚಲಾಗಿದ್ದು, ವಿಚಾರಣೆಗೊಳಪಡಿಸಲಾಗಿದೆ ಎಂದೂ ಅವರು ಹೇಳಿದರು.
ಪ್ಯಾಡಕ್‌ಗೆ ಸೇರಿದ ಎರಡು ಕಾರುಗಳನ್ನೂ ಪೊಲಿಸರು ಪತ್ತೆ ಹಚ್ಚಿದ್ದಾರೆ. ಪ್ರದೇಶದಲ್ಲಿ ಇತರ ಕಡೆಗಳಲ್ಲಿಯೂ ಗುಂಡು ಹಾರಾಟಗಳು ನಡೆದಿವೆ ಎಂಬ ವದಂತಿಗಳು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಲಾಸ್‌ವೆಗಾಸ್‌ನಲ್ಲಿರುವ ಕ್ಯಾಸಿನೋಗಳು, ನೈಟ್‌ಕ್ಲಬ್‌ಗಳು ಮತ್ತು ವ್ಯಾಪಾರ ಮಳಿಗೆ ಗಳು ಪ್ರತಿವರ್ಷ ವಿಶ್ಯಾದ್ಯಂತದಿಂದ ಸುಮಾರು 35 ಲಕ್ಷ ಜನರನ್ನು ಆಕರ್ಷಿಸುತ್ತಿವೆ. ರವಿವಾರ ರಾತ್ರಿ 10 ಗಂಟೆಯ ಬಳಿಕ ಗುಂಡುಹಾರಾಟ ಪ್ರಾರಂಭಗೊಂಡಾಗ ಲಾಸ್‌ವೆಗಾಸ್ ಸ್ಟ್ರಿಪ್‌ನ ನೆವಾಡಾದ ಮಾಂಡಲೇ ಬೇ ರೆಸಾರ್ಟ್ ಮತ್ತು ಕ್ಯಾಸಿನೋದ ಹೊರಗೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರೂಟ್ 91 ಹಾರ್ವೆಸ್ಟ್ ಫೆಸ್ಟಿವಲ್‌ನಲ್ಲಿ ಸಹಸ್ರಾರು ಜನರು ಸೇರಿದ್ದರು. ಎರಿಕ್ ಚರ್ಚ್, ಸ್ಯಾಮ್ ಹಂಟ್ ಮತ್ತು ಜೇಸನ್ ಅಲ್ಡೀನ್ ಅವರಂತಹ ಖ್ಯಾತ ನಟರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರವಿವಾರ ಈ ಸಂಗೀತೋತ್ಸವದ ಅಂತಿಮ ದಿನವಾಗಿತ್ತು.
ಗಾಯಾಳುಗಳ ಪೈಕಿ 14 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಯುನಿವರ್ಸಿಟಿ ಮೆಡಿಕಲ್ ಸೆಂಟರ್ ಆಸ್ಪತ್ರೆಯ ವಕ್ತಾರೆ ತಿಳಿಸಿದರು. ಎಲ್ಲರಿಗೂ ಗುಂಡಿನ ಗಾಯಗಳಾ ಗಿವೆ ಎಂದರು.
ರಾತ್ರಿ 10.45ರ ಸುಮಾರಿಗೆ ಅಲ್ಡೀನ್ ಕಾರ್ಯಕ್ರಮ ನೀಡುತ್ತಿದ್ದಾಗ ಮಾರಣಹೋಮ ಆರಂಭಗೊಂಡಿತ್ತು. ತಕ್ಷಣ ಅವರನ್ನು ವೇದಿಕೆಯಿಂದ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿತ್ತು. ಎಲ್ಲ ಕಲಾವಿದರು ಸುರಕ್ಷಿತರಾಗಿದ್ದಾರೆಂದು ಸಿಎನ್‌ಎನ್ ವರದಿ ಮಾಡಿದೆ.
ಹೋಟೆಲ್‌ನ 32ನೇ ಅಂತಸ್ತಿನಿಂದ ಗುಂಡುಗಳನ್ನು ಹಾರಿಸಲಾಗಿದ್ದು,ಅಲ್ಲಿಯೇ ಹಂತಕ ಪೊಲಿಸರ ಗುಂಡುಗಳಿಗ ಬಲಿಯಾಗಿದ್ದಾನೆ. ಆ ಸ್ಥಳದಲ್ಲಿ ಹಲವಾರು ರೈಫಲ್‌ಗಳು ಪತ್ತೆಯಾಗಿವೆ. ಹತ್ಯಾಕಾಂಡದ ಉದ್ದೇಶ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಲಂಬಾರ್ಡೊ ತಿಳಿಸಿದರು.
ಕನಿಷ್ಠ ಓರ್ವ ಪೊಲೀಸ್ ಅಧಿಕಾರಿಯನ್ನು ಗುಂಡಿನ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. ಕರ್ತವ್ಯ ಮುಗಿಸಿ ವಿರಾಮದಲ್ಲಿದ್ದ ಪೊಲೀಸ್ ಅಧಿಕಾರಿಗಳೂ ಮೃತರಲ್ಲಿ ಸೇರಿದ್ದಾರೆ ಎನ್ನಲಾಗಿದೆ.
ಮಾಂಡಲೇ ಹೋಟೆಲ್ ಮೆಕ್‌ಕ್ಯಾರನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವೇ ಇದ್ದು, ಘಟನೆಯ ಬೆನ್ನಿಗೇ ವಿಮಾನಯಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿತ್ತು.







