'ಇದಾರೆ ಅದಬ್-ಇ-ಇಸ್ಲಾಮಿ ಹಿಂದ್' ರಾಷ್ಟ್ರೀಯ ಅಧ್ಯಕ್ಷ ಉಸ್ಮಾನಿ ಅವರಿಗೆ ಸನ್ಮಾನ

ಭಟ್ಕಳ, ಅ. 2: ರಾಷ್ಟ್ರೀಯ ಇಸ್ಲಾಮಿ ಸಾಹಿತ್ಯ ಆಂದೋಲನ ಇದಾರೆ ಅದಬ್-ಇ-ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಟ್ಕಳ ಅಂಜುಮನ್ ಪದವಿ ಮಹಾವಿದ್ಯಾಲಯ ಉರ್ದು ವಿಭಾಗದ ಮುಖ್ಯಸ್ಥ ಡಾ.ಷಾ ರಷಾದ್ ಉಸ್ಮಾನಿಯವರಿಗೆ ಇದಾರೆ ಅದಬೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇತ್ತಿಚೆಗೆ ದೆಹಲಿಯಲ್ಲಿ ಜರಗಿದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಮುಂದಿನ ನಾಲ್ಕು ವರ್ಷದ ಅವಧಿಗಾಗಿ ಡಾ. ಉಸ್ಮಾನಿವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಾಹಿತಿ ಡಾ. ಹನೀಫ್ ಶಬಾಬ್ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಸ್ಮಾನಿ ಇಸ್ಲಾಮಿ ಸಾಹಿತ್ಯವು ಅಪಾರವಾದ ಜ್ಞಾನ ಭಂಡಾರವನ್ನು ಹೊಂದಿದ್ದು ಅಗೆದಷ್ಟು ಆಳವಾಗಿದೆ. ಸಾಹಿತ್ಯದ ಮೂಲಕ ಸಮಾಜದವನ್ನು ರೂಪಿಸುವ ಕೆಲಸ ಸಂಸ್ಥೆ ಮಾಡುತ್ತಿದೆ ಎಂದ ಅವರು ರಾಷ್ಟ್ರಮಟ್ಟದ ಹೊಣೆಗಾರಿಕೆ ನನ್ನ ಮೇಲೆ ಬಂದಿದ್ದು ಈ ಆಂದೋಲವನ್ನು ರಾಷ್ಟ್ರವ್ಯಾಪಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಬಿಹಾರ ಮೂಲದವರಾದ ಕಳೆದ 25ವರ್ಷಗಳಿಂದ ಭಟ್ಕಳದ ಅಂಜುಮನ್ ಸಂಸ್ಥೆಯಲ್ಲಿ ಉರ್ದು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು ಹಲವಾರು ಸಾಹಿತ್ಯಿಕ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯದಲ್ಲಿ ರಚನಾತ್ಮಕತೆಯನ್ನು ಮೈಗೂಡಿಸಿಕೊಂಡಿರುವ ಇವರ ಲೇಕನಗಳು ಅಂತಾರಾಷ್ಟ್ರಿಯ ಮಟ್ಟದ ಪಾಕ್ಷಿಕ, ಮಾಸಿಕಗಳಲ್ಲೂ ಪ್ರಕಟಗೊಳ್ಳುತ್ತವೆ.
ಈ ಸಂದರ್ಭದಲ್ಲಿ ಇದಾರೆ ಅದಬೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಕಾದಿರ್ ಮೀರಾ ಪಟೇಲ್, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಕರಾವಳಿ ಕೆನರಾ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್, ಮೌಲಾನ ಸೈಯ್ಯದ್ದ ಝುಬೈರ್ ಸೇರಿದಂತೆ ಹಲವರು ಉಪಸ್ಥಿತಿದ್ದರು.







