ಮೀಸೆ ‘ಬೆಳೆಸಿದ’ ಕಾರಣಕ್ಕೆ ಮತ್ತೋರ್ವ ದಲಿತ ಯುವಕನಿಗೆ ಹಲ್ಲೆ

ಅಹ್ಮದಾಬಾದ್, ಅ.2: ಮೀಸೆ ‘ಬೆಳೆಸಿದ’ ಕಾರಣಕ್ಕೆ ದಲಿತ ಯುವಕನನ್ನು ರಜಪೂತ ಸಮುದಾಯದ ವ್ಯಕ್ತಿಗಳು ಹಿಗ್ಗಾಮುಗ್ಗಾ ಥಳಿಸಿದ ಮತ್ತೊಂದು ಘಟನೆ ಗುಜರಾತ್‌ನ ಗಾಂಧೀನಗರದಲ್ಲಿ ನಡೆದಿದೆ.
ಒಂದು ಘಟನೆ ಸೆ.25ರಂದು ನಡೆದಿದ್ದರೆ ಮತ್ತೊಂದು ಘಟನೆ ಸೆ.29ರಂದು ಗಾಂಧೀನಗರ ಜಿಲ್ಲೆಯ ಲಿಂಬೋದರ ಗ್ರಾಮದಲ್ಲಿ ನಡೆದಿದೆ. ಮೀಸೆ ಬೆಳೆಸಿದ ಕಾರಣಕ್ಕೆ ತನ್ನ ಮೇಲೆ ಭರತ್‌ಸಿಂಹ ವೇಲ ಎಂಬಾತ ಸೆ.29ರಂದು ಹಲ್ಲೆ ನಡೆಸಿರುವುದಾಗಿ ಕೃಣಾಲ್ ಮಹೇರಿಯ ಎಂಬ ವಿದ್ಯಾರ್ಥಿ ದೂರು ನೀಡಿದ್ದಾನೆ.
ಶುಕ್ರವಾರ ರಾತ್ರಿ ನನ್ನ ಸ್ನೇಹಿತನನ್ನು ಭೇಟಿಯಾಗಿ ವಾಪಸು ಬರುತ್ತಿದ್ದಾಗ ವೇಲ ಹಾಗೂ ಇತರರು ನನ್ನನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿದ್ದಾರೆ. ‘ಮೀಸೆ ಬೆಳೆಸಿದ ಮಾತ್ರಕ್ಕೆ ನೀನು ರಜಪೂತನಾದೆ ಎಂದು ಭಾವಿಸಬೇಡ’ ಎಂದು ವೇಲ ಹಂಗಿಸಿದಾಗ ನಾನು ಆತನನ್ನು ನಿರ್ಲಕ್ಷಿಸಿ ಮುನ್ನಡೆದೆ. ಆಗ ಆತ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ . ಗಾಂಧೀನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ರವಿವಾರ ಮನೆಗೆ ಮರಳಿದ್ದೇನೆ ಎಂದು ಕೃಣಾಲ್ ಮಹೇರಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಇದರಂತೆ ವೇಲ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕ್ರಿಮಿನಲ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಸೆ.25ರಂದು ನಡೆದಿದ್ದ ಇನ್ನೊಂದು ಘಟನೆಯಲ್ಲಿ ಮೀಸೆ ‘ಬೆಳೆಸಿದ’ ಕಾರಣಕ್ಕೆ ದಲಿತ ಯುವಕನಿಗೆ ಮೇಲ್ವರ್ಗದ ವ್ಯಕ್ತಿಗಳು ಥಳಿಸಿದ ಘಟನೆ ಗಾಂಧೀನಗರದಲ್ಲಿ ನಡೆದಿದೆ.
24ರ ಹರೆಯದ ಪಿಯೂಷ್ ಪರ್ಮಾರ್ ಎಂಬ ದಲಿತ ಯುವಕ ತನ್ನ ಸೋದರ ಸಂಬಂಧಿ ದಿಗಂತ್ ಮಹೇರಿಯ ಎಂಬಾತನ ಜೊತೆ ಗ್ರಾಮದಲ್ಲಿ ನಡೆದಿದ್ದ ‘ಗರ್ಬ ನೃತ್ಯ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ವಾಪಸಾಗುತ್ತಿದ್ದಾಗ ಕೆಲವು ವ್ಯಕ್ತಿಗಳು ಇವರನ್ನುದ್ದೇಶಿಸಿ ಜಾತಿ ನಿಂದನೆ ಮಾಡಲಾರಂಭಿಸಿದರು ಎನ್ನಲಾಗಿದೆ. ದಲಿತನಾಗಿರುವ ಕಾರಣ ಮೀಸೆ ಬೆಳೆಸಿರುವುದು ಮಹಾಪರಾಧ ಎಂಬ ರೀತಿಯಲ್ಲಿ ಅವರು ನಿಂದಿಸುತ್ತಿದ್ದರು ಎಂದು ಪರ್ಮಾರ್ ತಿಳಿಸಿದ್ದಾನೆ.
ಬೈಯ್ಗಳು ಕೇಳಿ ಬರುತ್ತಿದ್ದ ಸ್ಥಳದ ಸಮೀಪಕ್ಕೆ ತೆರಳಿ ನೋಡಿದಾಗ ಮೇಲ್ವರ್ಗಕ್ಕೆ ಸೇರಿದ ದರ್ಬರ್ ಸಮುದಾಯದ ಮೂವರು ವ್ಯಕ್ತಿಗಳು ಅಲ್ಲಿದ್ದರು. ನಾವು ಅವರನ್ನು ನಿರ್ಲಕ್ಷಿಸಿ ಮನೆಯತ್ತ ತೆರಳಿದೆವು. ನಮ್ಮನ್ನು ಮನೆಯವರೆಗೂ ಹಿಂಬಾಲಿಸಿಕೊಂಡು ಬಂದ ಆ ಮೂವರು, ಕೆಳವರ್ಗದ ಸಮುದಾಯಕ್ಕೆ ಸೇರಿದ ನೀನು ಮೀಸೆ ಬೆಳೆಸಿದ್ದೇಕೆ ಎಂದು ಪ್ರಶ್ನಿಸಿ ಮೊದಲು ದಿಗಂತ್ ಮೇಲೆ ಹಲ್ಲೆ ನಡೆಸಿದರು. ಬಳಿಕ ನನ್ನನ್ನು ಥಳಿಸಿದರು ಎಂದು ಪರ್ಮಾರ್ ದೂರಿದ್ದಾನೆ. ಇದರಂತೆ ದಲಿತ ದೌರ್ಜನ್ಯ ಕಾಯ್ದೆಯಡಿ ಅದೇ ಗ್ರಾಮಕ್ಕೆ ಸೇರಿದ ಮಯೂರಸಿನ್ಹ ವೇಲಾ, ರಾಹುಲ್ ವಿಕ್ರಮಸಿನ್ಹ ಸೆರಾಥಿಯ ಮತ್ತು ಅಜಿತ್‌ಸಿನ್ಹ ವೇಲಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.







