ಅ.5 ರಂದು ತನಿಖೆಯ ವೇಗ ಹೆಚ್ಚಳಕ್ಕೆ ಆಗ್ರಹಿಸಿ ರಾಷ್ಟ್ರಮಟ್ಟದ ರ್ಯಾಲಿ
ಗೌರಿ ಲಂಕೇಶ್ ಹತ್ಯೆ ಪ್ರಕರಣ
ಬೆಂಗಳೂರು, ಅ.2: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಅ.5 ಕ್ಕೆ ಒಂದು ತಿಂಗಳು ಕಳೆಯುತ್ತಿರುವ ನಿಟ್ಟಿನಲ್ಲಿ ಗೌರಿ ಲಂಕೇಶ್ ಹತ್ಯಾ ವಿರೋಧಿ ವೇದಿಕೆ ವತಿಯಿಂದ ತನಿಖೆಯ ವೇಗವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ದಿಲ್ಲಿಯಲ್ಲಿ ರಾಷ್ಟ್ರಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಲೇಖಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಖಂಡಿಸಿ ದೇಶದ ಎಲ್ಲ ಕಡೆಗಳಲ್ಲಿ ಪ್ರತಿಭಟನೆ, ಪ್ರತಿರೋಧ ಸಮಾವೇಶಗಳು ನಡೆದವು. ಕೇರಳ, ತ್ರಿಪುರಾ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳೇ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಇದುವರೆಗೂ ಹಂತಕರನ್ನು ಬಂಧಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಹೇಳಿದರು.
ಮತೀಯತೆಯ ಹೆಸರಿನಲ್ಲಿ ರಕ್ತ ಚೆಲ್ಲಲು ಬಿಡುವುದಿಲ್ಲ ಎಂದು ಹೇಳಿದ್ದರು ಮಹಾತ್ಮ ಗಾಂಧೀಜಿ. ಆದರೆ, ಇಂದು ದೇಶದ ಬೀದಿಗಳಲ್ಲಿ ನಿಂತು ಎಷ್ಟು ರಕ್ತ ಚೆಲ್ಲುತ್ತೀರಾ, ನಿಲ್ಲಿಸಿ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಬಹುಸಂಸ್ಕೃತಿಯನ್ನು ನಾಶ ಮಾಡುವ ಸಲುವಾಗಿ ಕೋಮುವಾದಿಗಳು ದೇಶದಲ್ಲಿ ಮತೀಯ ಹೆಸರಿನಲ್ಲಿ ದಾಳಿ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಕಳೆದ ಎರಡು ವರ್ಷಗಳ ಹಿಂದೆ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಕೊಲೆ ಮಾಡಿದರು. ಇದಕ್ಕೂ ಮೊದಲು ವಿಚಾರವಾದಿ ಲಿಂಗಣ್ಣ ಸತ್ಯಂಪೇಟೆ ಅನುಮಾನಾಸ್ಪದವಾಗಿ ಸಾವು ಸಂಭವಿಸಿತು. ಅನಂತರ ಮಹಾರಾಷ್ಟ್ರದಲ್ಲಿ ವಿಚಾರವಾದಿಗಳ ದಾಭೋಲ್ಕರ್, ಪನ್ಸಾರೆಯನ್ನು ಹತ್ಯೆ ಮಾಡಲಾಯಿತು. ಒಂದು ಕಡೆ ವಿಚಾರವಾದಿಗಳನ್ನು ಹತ್ಯೆ ಮಾಡುವ ಮೂಲಕ ಸತ್ಯವನ್ನು ಹೊರಬರದಂತೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ದಲಿತ, ಅಲ್ಪಸಂಖ್ಯಾತ, ಮಹಿಳೆಯರ ವೆುೀಲೆ ದಾಳಿ ಮಾಡುವ ಮೂಲಕ ದೇಶದಲ್ಲಿ ರಕ್ತಸಿಕ್ತ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ ಎಂದು ದೂರಿದರು.
ದೇಶದಲ್ಲಿ ಜನವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿರುವ ಕೇಂದ್ರ ಸರಕಾರ, ಅದನ್ನು ಜನರಿಗೆ ದಿಕ್ಕು ತಪ್ಪಿಸಿ, ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಈ ಕೊಲೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಲಿಂಗಾಯತರು ಹಿಂದೂಗಳಲ್ಲ. ಬದಲಿಗೆ, ಸಮತೆಯ ಕನಸು ಕಂಡಿದ್ದ, ಸಮಾಜವಾದಿ ನಾಡು ಕಟ್ಟುವ ಶಕ್ತಿಯಿದೆ ಎಂದು ಸಂಶೋಧನೆ ಮೂಲಕ ತಿಳಿಸಿದ ಕಲಬುರ್ಗಿ ಹೇಳಿದರು. ಆದುದರಿಂದಲೇ ಅವರನ್ನು ಕೊಲೆ ಮಾಡಿದರು ಎಂದರು.
ಮಹಾತ್ಮಗಾಂಧಿಯನ್ನು ಕೊಲೆ ಮಾಡಿದ ನಾಥೂರಾಮ್ ಗೋಡ್ಸೆಗೆ ದೇವಾಲಯ ನಿರ್ಮಿಸಿ, ಸಂಭ್ರಮಿಸಿದ ಸಿದ್ಧಾಂತ ಹೊಂದಿರುವವರೇ ಇಂದು ಗೌರಿ, ಕಲಬುರ್ಗಿ, ಪನ್ಸಾರೆ ಕೊಲೆ ಮಾಡಿದ್ದಾರೆ. ಹೀಗಾಗಿ, ತ್ವರಿತವಾದ ಹಾಗೂ ನಿಷ್ಪಕ್ಷವಾದ ತನಿಖೆ ನಡೆಯಬೇಕು. ಹಂತಕರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಲೇಖಕ ಶ್ರೀಪಾದ್ ಭಟ್, ಪತ್ರಕರ್ತ ನರಸಿಂಹಮೂರ್ತಿ ದೊಡ್ಡಿಪಾಳ್ಯ, ಜೆಎಂಎಸ್ ಮುಖಂಡರಾದ ಗೌರಮ್ಮ, ವಕೀಲ ಅನಂತ್‌ನಾಯಕ್ ಉಪಸ್ಥಿತರಿದ್ದರು.







