ಶಂಕಿತ ಡೆಂಗ್ ಜ್ವರ: ಕರ್ತವ್ಯನಿರತ ಪೊಲೀಸ್ ಪೇದೆ ಮೃತ್ಯು
ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ

ಶಿವಮೊಗ್ಗ, ಅ. 2: ಶಂಕಿತ ಡೆಂಗ್ ಸ್ವರದಲ್ಲಿ ಬಳಲುತ್ತಿದ್ದ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಪೇದೆಯೊಬ್ಬರು ಮೈಸೂರು ದಸರಾ ಬಂದೋಬಸ್ತ್‌ನ ವೇಳೆ ಕುಸಿದು ಬಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಸೊರಬ ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್ (30) ಮೃತಪಟ್ಟ ಪೊಲೀಸ್ ಪೇದೆ. ಮಂಜುನಾಥ್ ಮೂಲತಃ ಸೊರಬ ತಾಲೂಕು ವಡ್ಡಿಗೆರೆ ಗ್ರಾಮದವರಾಗಿದ್ದು, 2007 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಇವರಿಗೆ 5 ತಿಂಗಳ ಹೆಣ್ಣು ಮಗು ಇದೆ.
ಕಳೆದ ಕೆಲ ದಿನಗಳಿಂದ ಮಂಜುನಾಥ್ ಅವರು ಜ್ವರದಿಂದ ಬಳಲುತ್ತಿದ್ದರು. ಆದಾಗ್ಯೂ ಇವರನ್ನು ಮೈಸೂರು ದಸರಾ ಕಾರ್ಯಕ್ರಮದ ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯದಲ್ಲಿದ್ದ ವೇಳೆಯೇ ಇವರು ತೀವ್ರ ಸ್ವರೂಪದ ಜ್ವರ ಬಾಧೆಗೆ ತುತ್ತಾಗಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸೋಮವಾರ ಬೆಳಗ್ಗೆ ಮೃತದೇಹವನ್ನು ಶಿವಮೊಗ್ಗದ ಡಿ.ಎ.ಆರ್. ಮೈದಾನಕ್ಕೆ ತರಲಾಗಿತ್ತು. ಈ ವೇಳೆ ಪೊಲೀಸ್ ಇಲಾಖೆಯಿಂದ ಪಾರ್ಥಿವ ಶರೀರಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು.
ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು. ತದನಂತರ ಮೃತದೇಹವನ್ನು ಹುಟ್ಟೂರಾದ ಸೊರಬ ತಾಲೂಕಿನ ವಡ್ಡಿಗೆರೆಗೆ ಕೊಂಡೊಯ್ಯಲಾಯಿತು.
ಆಕ್ರಂದನ: ಮಂಜುನಾಥ್ ಅವರ ಪಾರ್ಥಿವ ಶರೀರವು ಡಿಎಆರ್ ಮೈದಾನಕ್ಕೆ ತಂದ ವೇಳೆ ಅವರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ತಮ್ಮ ಪುತ್ರ ಜ್ವರದಿಂದ ಬಳಲುತ್ತಿದ್ದರೂ ಆತನಿಗೆ ರಜೆ ನೀಡದೆ ಕರ್ತವ್ಯಕ್ಕೆ ನಿಯೋಜಿಸಿರುವ ಇಲಾಖೆಯ ಕ್ರಮದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಹರಿಹಾಯ್ದ ಘಟನೆಯೂ ನಡೆಯಿತು ಎನ್ನಲಾಗಿದೆ.







