15 ದಿನಗಳ ಪೆರೋಲ್ ಕೋರಿ ಶಶಿಕಲಾ ಅರ್ಜಿ: ದಿನಕರನ್

ಚೆನ್ನೈ,ಅ.2: ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿರುವ ವಿ.ಕೆ ಶಶಿಕಲಾ ಅನಾರೋಗ್ಯದಿಂದ ನರಳುತ್ತಿರುವ ತನ್ನ ಪತಿ ಎಂ.ನಟರಾಜನ್ ಅವರನ್ನು ಭೇಟಿಯಾಗಲು 15 ದಿನಗಳ ಪೆರೋಲ್ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರ ಬಂಧು ಹಾಗೂ ಉಪೇಕ್ಷಿತ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಅವರು ಸೋಮವಾರ ಇಲ್ಲಿ ತಿಳಿಸಿದರು.
ನಟರಾಜನ್ ಯಕೃತ್ತು ಕಾಯಿಲೆಯಿಂದ ನರಳುತ್ತಿದ್ದು, ಇದರಿಂದಾಗಿ ಅವರ ಮೂತ್ರಪಿಂಡಗಳು ವಿಫಲಗೊಂಡಿವೆ. ಜೊತೆಗೆ ಉಸಿರಾಟದ ಸಮಸ್ಯೆಯೂ ಕಾಡುತ್ತಿದ್ದು, ಅವರಿಗೆ ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಶಶಿಕಲಾರಿಗೆ ಜೈಲಿನಿಂದ ಸಾಮಾನ್ಯ ರಜೆ ಲಭಿಸುವ ಆಶಯವನ್ನು ವ್ಯಕ್ತಪಡಿಸಿದ ದಿನಕರನ್, ಪೆರೋಲ್ ಅವಧಿಯ ಬಗ್ಗೆ ನಮಗೆ ಖಚಿತವಿಲ್ಲ. ಅದನ್ನು ಜೈಲಿನ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದರು.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಆಯೋಗದಿಂದ ವಿಚಾರಣೆಯ ಕುರಿತು ಅವಿಶ್ವಾಸ ವ್ಯಕ್ತಪಡಿಸಿದ ದಿನಕರನ್, ಸಿಬಿಐ ತನಿಖೆ ನಡೆಯಬೇಕೆಂದು ನಾವು ಬಯಸಿದ್ದೇವೆ ಎಂದರು.







