ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ಆಗ್ರಹಿಸಿ ಧರಣಿ

ಬೆಂಗಳೂರು, ಅ.2: ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ತನಿಖೆ ತೀವ್ರಗೊಳಿಸಿ ತ್ವರಿತವಾಗಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳಿಂದ ನಗರದ ಗಾಂಧಿ ವೃತ್ತದ ಬಳಿ ಧರಣಿ ನಡೆಸಿದರು.
ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಮಹಾತ್ಮಗಾಂಧಿ ಜಯಂತಿ ಅಂಗವಾಗಿ ‘ಗಾಂಧಿಯನ್ನು ಕೊಂದವರು ಗೌರಿಯನ್ನು ಕೊಂದರು’ ಎಂಬ ಘೋಷಣೆಯಡಿ ಪ್ರತಿಭಟಿಸಿದ ನೂರಾರು ಕಾರ್ಯಕರ್ತರು ವಿಚಾರವಾದಿಗಳ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳನ್ನು ತೀವ್ರವಾಗಿ ಖಂಡಿಸಿದರು. ಹಾಗೂ ಗೌರಿ ಹಂತಕರನ್ನು ಶೀಘ್ರ ಬಂಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ರಾಜ್ಯದಲ್ಲಿ ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಧರಣಿನಿರತರರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಜಗತ್ತಿಗೆ ಶಾಂತಿ ಸಂದೇಶ ನೀಡಿದ ಗಾಂಧಿ ಜನ್ಮದಿನದಂದು ಹಂತಕರನ್ನು ಬಂಧಿಸುವಂತೆ ಬೀದಿಯಲ್ಲಿ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿರುವುದು ದುರಂತ. ಗೌರಿ ಲಂಕೇಶ್ ಹತ್ಯೆಯಾಗಿ ಒಂದು ತಿಂಗಳು ಕಳೆಯುತ್ತಿದೆ. ಆದರೆ, ಇದುವರೆಗೂ ಹಂತಕರ ಸುಳಿವು ಹುಡುಕುವುದರಲ್ಲಿ ಪೊಲೀಸ್ ಇಲಾಖೆ ಮತ್ತು ಸರಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ. ಕಲುಬುರ್ಗಿ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿರೋದ ರ್ಯಾಲಿ, ಸಮಾವೇಶ ಎಲ್ಲದರಲ್ಲೂ ಗೌರಿ ಲಂಕೇಶ್ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಹೀಗಾಗಿ, ಅವರ ವಿಚಾರಗಳನ್ನು ಎದುರಿಸಲಾಗದವರು, ಸಹಿಸಲು ಸಾಧ್ಯವಾಗದವರು ಅವರನ್ನು ಹತ್ಯೆ ಮಾಡಿದ್ದಾರೆ. ಆದರೆ, ಒಂದು ಗೌರಿ, ಕಲಬುರ್ಗಿ, ಪನ್ಸಾರೆಯನ್ನು ಹತ್ಯೆ ಮಾಡಿ ವಿಚಾರವಾದಿಗಳನ್ನು ಕೊಲ್ಲಬಹುದು ವಿನಹಃ, ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ಒಬ್ಬ ವಿಚಾರವಾದಿಯನ್ನು ಕೊಂದರೆ, ನೂರಾರು ವಿಚಾರವಾದಿಗಳು ಹುಟ್ಟಿಕೊಳ್ಳುತ್ತಾರೆ ಎಂದು ಹೇಳಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಮಹಾತ್ಮರ ದಿನವನ್ನು ಸಂತೋಷ, ಸಂಭ್ರಮದಿಂದ ಆಚರಿಸಬೇಕಿತ್ತು. ಆದರೆ, ಈ ದಿನವನ್ನು ನೋವಿನ ದಿನವನ್ನಾಗಿ ಆಚರಿಸುತ್ತಿದ್ದೇವೆ. ಭಾರತದಲ್ಲಿ ಸತ್ಯವನ್ನು ಸಾಯಿಸುವ ಕೆಲಸ ಪ್ರತ್ಯಕ್ಷವಾಗಿ ನಡೆಯುತ್ತಿದೆ. ಮೌಢ್ಯವನ್ನು ಜೀವಂತವಾಗಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅಂಬೇಡ್ಕರ್, ಬುದ್ಧ, ಬಸವ, ಗಾಂಧಿ ಸೇರಿದಂತೆ ಅನೇಕ ಜಾತ್ಯತೀತರು ತೋರಿಸಿದ ಹಾದಿಯಲ್ಲಿ ಸಂವಿಧಾನದ ಮೂಲಕ ನಾವೆಲ್ಲರೂ ನಡೆಯುತ್ತಿದ್ದೇವೆ. ಆದರೆ, ಇತ್ತೀಚಿಗೆ ಹಿಂಸಾತ್ಮಕ ಪ್ರವೃತ್ತಿ ಬೆಳೆಯುತ್ತಿದೆ. ಸುಳ್ಳಿನ ಮೇಲೆ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೀಗಾಗಿ, ಸತ್ಯ ಹೇಳುವವರನ್ನು ಹತ್ಯೆ ಮಾಡಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಚಾಕು, ಚೂರಿ, ಮಾರಕಾಸ್ತ್ರಗಳನ್ನು ಕೈಯಲ್ಲಿಡಿದುಕೊಂಡು ವೆುರವಣಿಗೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವೀಯ ವೌಲ್ಯಗಳುಳ್ಳ ದಾರಿಯನ್ನು ಇಂದಿನ ಯುವ ಸಮುದಾಯಕ್ಕೆ ತೋರಿಸಬೇಕಿದೆ ಎಂದರು.
ಮಹಿಳಾ ಸಂಘಟನೆ ಮುಖಂಡರಾದ ಕೆ.ಎಸ್.ಲಕ್ಷ್ಮಿ ಮಾತನಾಡಿ, ಗೌರಿ ಲಂಕೇಶ್‌ರನ್ನು ಹೊಟ್ಟೆ ಪಾಡಿಗಾಗಿ ಕೊಲೆ ಮಾಡುವವರು ಮಾಡಿದ ಕೆಲಸವಲ್ಲ. ಜಾತ್ಯತೀತ, ಪ್ರಜಾಪ್ರಭುತ್ವದ ಭಾಗವಾಗಿ, ವೌಢ್ಯದ ವಿರುದ್ಧ ಹೋರಾಡುತ್ತಿದ್ದರ ಪರಿಣಾಮವಾಗಿ, ಇದನ್ನು ಸಹಿಸದವರು ಕೊಲೆ ಮಾಡಿದ್ದಾರೆ. ಹೀಗಾಗಿ, ಸಮಗ್ರ ತನಿಖೆ ನಡೆಸಿ ಹತ್ಯೆ ಮಾಡಿದವರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಲೇಖಕಿ ಕೆ.ನೀಲಾ, ಲೇಖಕ ಶ್ರೀಪಾದ್‌ಭಟ್, ಹೋರಾಟಗಾರ ನಗರಗೆರೆ ರಮೇಶ್, ಜೆಎಂಎಸ್ ಕಾರ್ಯದರ್ಶಿ ಗೌರಮ್ಮ, ಚಿಂತಕ ಜಿ.ಎನ್.ನಾಗರಾಜ್, ವಕೀಲ ಅನಂತ್‌ನಾಯಕ್, ವಿದ್ಯಾರ್ಥಿ ಮುಖಂಡರಾದ ವಿ.ಅಂಬರೀಶ್, ಜ್ಯೋತಿ ಅನಂತಸುಬ್ಬರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







