ಆರೆಸ್ಸೆಸ್ ಪ್ರಚಾರಕ ರಾಮಣ್ಣ ವಿರುದ್ಧ ಲಿಂಗಾಯತ ಮುಖಂಡರ ವಾಗ್ದಾಳಿ
ಬೆಂಗಳೂರು, ಅ.2: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಚಳವಳಿಯನ್ನು ಟೀಕಿಸುತ್ತಾ, ಲಿಂಗಾಯತರನ್ನು ‘ಶನಿ ಸಂತಾನ’ ಎಂದಿರುವ ಆರೆಸ್ಸೆಸ್ ಕ್ಷೇತ್ರ ಪ್ರಚಾರಕ ಸು.ರಾಮಣ್ಣ ವಿರುದ್ಧ ವಿಶ್ವ ಲಿಂಗಾಯತ ಮಹಾಸಭಾದ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆಯನ್ನು ಹೊರಡಿಸಿರುವ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್, ಸಂಜಯ ಮಾಕಲ್, ಬಸವಾದಿ ಶರಣರು ಹಾಗೂ ಲಿಂಗಾಯತರನ್ನು ಶನಿ ಸಂತಾನವೆಂದು ಕರೆದಿರುವುದು ಸು.ರಾಮಣ್ಣನವರ ಮನುವಾದಿ ಸಿದ್ಧಾಂತವನ್ನು ಎತ್ತಿ ತೋರಿಸುತ್ತದೆ ಎಂದು ಕಿಡಿಗಾರಿದ್ದಾರೆ. ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಸು.ರಾಮಣ್ಣ, ಬಸವಾದಿ ಶರಣ ಪರಂಪರೆಯನ್ನು ಅವಮಾನಿಸುವ, ಲಿಂಗಾಯತ ಸಮಾಜದ ಆತ್ಮಾಭಿಮಾನ ಕೆಣಕುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಪ್ರಪಂಚಕ್ಕೆ ಮೊಟ್ಟಮೊದಲು ಪ್ರಜಾಪ್ರಭುತ್ವ ಹಾಗೂ ಸ್ತ್ರೀ ಸ್ವಾತಂತ್ರ್ಯ ಪರಿಚಯಿಸಿದ ಬಸವಾದಿ ಶರಣ ಪರಂಪರೆಯನ್ನೆ ಶನಿ ಸಂತಾನವೆಂಬಂತೆ ಹೇಳಿಕೆ ನೀಡಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಾಯತ ಮಠಾಧೀಶರನ್ನು ಬುದ್ಧಿ ಭ್ರಷ್ಟರು ಹಾಗೂ ಹೋರಾಟಗಾರರಿಗೆ ಮತ್ತು ಸಮಾಜದವರನ್ನು ಶನಿ ಸಂತಾನವೆಂದು ರಾಮಣ್ಣ ಕರೆದಿರುವುದು ಅವರ ಮನಸ್ಥಿತಿಯನ್ನು ಬಿಂಬಿಸುತ್ತದೆ. ಲಿಂಗಾಯತ ಮಠಾಧೀಶರನ್ನು ಅವರು ಯಾವ ದೃಷ್ಟಿಕೋನದಿಂದ ನೋಡುತ್ತಿದ್ದಾರೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮುಖಂಡರು ಹೇಳಿದ್ದಾರೆ.
ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಮಾಜದ ಬದ್ಧತೆ ಹಾಗೂ ಹೋರಾಟದಲ್ಲಿ ಯಾವುದೆ ರಾಜಿ ಇಲ್ಲ. ಈ ವಿಚಾರದಲ್ಲಿ ಆರೆಸ್ಸೆಸ್ ನ ಸು.ರಾಮಣ್ಣ ನಂತವರು ಮೂಗು ತೂರಿಸುವ ಅಗತ್ಯವಿಲ್ಲ. ಸ್ವತಂತ್ರ ಧರ್ಮದ ಹೋರಾಟ ಚುನಾವಣಾ ದೃಷ್ಟಿಕೋನ ಅಥವಾ ಯಾವುದೋ ಒಂದು ಪಕ್ಷಕ್ಕೆ ಬೆಂಬಲ ನೀಡುವ ಉದ್ದೇಶ ಹೊಂದಿಲ್ಲ. ಬದಲಾಗಿ ಸಮಾಜದ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ನಮ್ಮನ್ನು ಹಾಗೂ ಸಮಾಜವನ್ನು ನಿರ್ಲಜ್ಜರು ಎಂದು ಹೀಯಾಳಿಸುವುದಾದರೆ ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ. ಯಾರೋ ಕೆಲವರು ಟೀಕಿಸಿದ್ದಾರೆ ಎಂದ ಮಾತ್ರಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ. ನಿಂದಕರು ಹೆಚ್ಚಿದಷ್ಟು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಶಕ್ತಿ ಹೆಚ್ಚುತ್ತದೆ ಎಂದು ಮುಖಂಡರು ಪ್ರತಿಪಾದಿಸಿದ್ದಾರೆ.
ಸು.ರಾಮಣ್ಣ ಪ್ರತಿಪಾದಿಸುವ ಅಖಂಡ ಹಿಂದು ಪರಿಕಲ್ಪನೆಯಲ್ಲಿ ಶನಿ ಸಂತಾನಕ್ಕೆ ಜಾಗ ಇದೆ ಎಂದೆನಿಸುತ್ತದೆ. ಆ ಕಾರಣಕ್ಕಾಗಿಯೇ ಬಸವಾದಿ ಶರಣರ ಚಳವಳಿಯಲ್ಲಿ ತೊಡಗಿರುವ ಎಲ್ಲರನ್ನೂ ಶನಿ ಸಂತಾನ ಎಂದಿದ್ದಾರೆ. ಬಸವಣ್ಣ ಸೇರಿದಂತೆ ಮಾದರ ಚೆನ್ನಯ್ಯ, ಅಂಬಿಗರ ಚೌಡಯ್ಯ, ದೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಸೇರಿದಂತೆ ಎಲ್ಲ ಶರಣರು ರಾಮಣ್ಣನವರ ದೃಷ್ಟಿಯಲ್ಲಿ ಶನಿ ಸಂತಾನಗಳೇ ಎಂದು ಮುಖಂಡರು ಪ್ರಶ್ನಿಸಿದ್ದಾರೆ.
ಶರಣರ ವಿವಿಧ ಸಮಾಜಗಳಲ್ಲಿ ಜನಿಸಿರುವ ನಾವುಗಳು ಶನಿ ಸಂತಾನಗಳು ಎನ್ನುವದು ಆರೆಸ್ಸೆಸ್ ನವರ ವಾದವಾದರೆ, ಸು.ರಾಮಣ್ಣನವರಂತಹ ಮನೋಭೂಮಿಕೆ ಯುಳ್ಳ ಅಮಾನವೀಯ, ಅನ್ಯಾಯದ ಸಮಾಜ ವಿಚ್ಚಿದ್ರಕ ಹಾಗೂ ಕೇಳ ವರ್ಗಗಳನ್ನು ಶೋಷಣೆ ಮಾಡುತ್ತಿದ್ದ ಶಕ್ತಿಗಳ ವಿರುದ್ಧ ಸಿಡಿದೆದ್ದು ಬಸವಣ್ಣನವರು ಲಕ್ಷೋಪಲಕ್ಷ ಶರಣರೊಂದಿಗೆ ಹೊರ ಬಂದು ಸರ್ವರಿಗೂ ಸಮಾನತೆ ಸಾರುವ ಲಿಂಗಾಯತ ಧರ್ಮ ಸ್ಥಾಪಿಸಿದ್ದರು ಎಂದು ಅವರು ಹೇಳಿದ್ದಾರೆ.
ಆರೆಸ್ಸೆಸ್ ನ ಸು.ರಾಮಣ್ಣನಂತಹವರ ಮನೋಧರ್ಮವನ್ನು ಲಿಂಗಾಯತರು, ಕುರುಬರು, ದಲಿತರು ಇತರೆ ಹಿಂದುಳಿದ ವರ್ಗಗಳ ಯುವಕರು ಅರ್ಥೈಸಿಕೊಳ್ಳಬೇಕು. ಹಿಂದೊಮ್ಮೆ ಇವೇ ಶನಿ ಸಂತಾನ ಮತಗಳಿಂದ ಪ್ರಥಮ ಬಾರಿಗೆ ರಾಜಕೀಯ ಪಕ್ಷವೊಂದು ಅಧಿಕಾರ ಹಿಡಿದಿತ್ತು, ಆಗ ಈ ಮತಗಳು ಶನಿಸಂತಾನಗಳದ್ದು ಎಂದು ತಿಳಿದಿರಲಿಲ್ಲವೆ ಎಂದು ಮುಖಂಡರು ಪ್ರಶ್ನಿಸಿದ್ದಾರೆ.
ಸು.ರಾಮಣ್ಣನವರು ಲಿಂಗಾಯತ ಸಮಾಜ ಹಾಗೂ ಬಸವವಾದಿ ಶರಣರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದರ ವಿರುದ್ಧ ಆತ್ಮ ಗೌರವ, ಸ್ವಾಭಿಮಾನ ಪ್ರತೀಕವಾಗಿ ಸಾತ್ವಿಕ ಪ್ರತಿರೋಧ ತೋರದ ನಾಯಕರನ್ನು ಆತ್ಮ ಗೌರವ ಕಳೆದುಕೊಂಡವರು ಎಂದು ಸಮಾಜ ತಿಳಿಯಬೇಕಾಗುತ್ತದೆ ಎಂದು ಮುಖಂಡರು ಹೇಳಿದ್ದಾರೆ.







