ಮನೆಗೆ ಮರಳಿದ ಎಚ್.ಡಿ.ಕುಮಾರಸ್ವಾಮಿ
ಒಂದು ತಿಂಗಳ ವಿಶ್ರಾಂತಿಗೆ ವೈದ್ಯರ ಸಲಹೆ

ಬೆಂಗಳೂರು, ಅ.2: ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಆರೋಗ್ಯದಲ್ಲಿ ಚೇತರಿಕೆ ಉಂಟಾದ ಹಿನ್ನೆಲೆಯಲ್ಲಿ ಸೋಮವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಸೆ.23ರಂದು ಇಲ್ಲಿನ ಬನ್ನೇರುಘಟ್ಟ ರಸ್ತೆಯಲ್ಲಿನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಕುಮಾರಸ್ವಾಮಿ ಅವರು, ಹೃದಯ ಕವಾಟ ಚಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಇನ್ನೂ 1 ತಿಂಗಳು ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ನವೆಂಬರ್‌ನಿಂದ ರಾಜ್ಯ ಪ್ರವಾಸ: ಇಲ್ಲಿನ ಜೆ.ಪಿ.ನಗರದ ನಿವಾಸದಲ್ಲಿ ವಿಶ್ರಾಂತಿ ಪಡೆಯಲಿರುವ ಕುಮಾರಸ್ವಾಮಿ, ನವೆಂಬರ್ ಒಂದರಿಂದ ರಾಜ್ಯಾದ್ಯಂತ ಪ್ರವಾಸ ನಡೆಸುತ್ತೇನೆ. ವೈದ್ಯರ ಆರೈಕೆಯಿಂದ ನಿರೀಕ್ಷೆ ಮೀರಿ ಚೇತರಿಸಿಕೊಂಡಿದ್ದೇನೆ. ಒಂದು ತಿಂಗಳು ಕಾಲ ವಿಶ್ರಾಂತಿಗೆ ಸಲಹೆ ನೀಡಿದ್ದು, ಒಂದು ತಿಂಗಳು ತನ್ನ ಭೇಟಿಗೆ ಬರಬೇಡಿ ಎಂದು ಮನವಿ ಮಾಡಿದರು.
ನಿಮ್ಮ ಅಭಿಮಾನ, ಪ್ರೀತಿ-ವಿಶ್ವಾಸ ಹೃದಯದಲ್ಲಿರಲಿ. ನೀವು ಭೇಟಿಗೆ ಬರುವುದರಿಂದ ಆರೋಗ್ಯದಲ್ಲಿ ತೊಂದರೆಯಾಗಬಹುದು. ಹೀಗಾಗಿ 1 ತಿಂಗಳು ಸಹಕರಿಸಿ, ನಂತರ ನಾನೇ ಬಂದು ನಿಮ್ಮನ್ನು ಭೇಟಿ ಮಾಡುತ್ತೇನೆಂದು ಕುಮಾರಸ್ವಾಮಿ ತಿಳಿಸಿದರು.







