ಕುಷ್ಠರೋಗ ಆಸ್ಪತ್ರೆಯಲ್ಲಿ ‘ಪ್ರಾದೇಶಿಕ ಚರ್ಮರೋಗ ಸಂಸ್ಥೆ’ ಪ್ರಾರಂಭ: ಸಚಿವ ರಮೇಶ್ ಕುಮಾರ್

ಬೆಂಗಳೂರು, ಅ. 2: ನಗರದ ಹೃದಯ ಭಾಗದಲ್ಲಿರುವ ಮಾಗಡಿ ರಸ್ತೆ ಕುಷ್ಠರೋಗ ಆಸ್ಪತ್ರೆ ಆವರಣದಲ್ಲಿ ಚರ್ಮರೋಗಕ್ಕೆ ಸಂಬಂಧಪಟ್ಟ ಪ್ರಾದೇಶಿಕ ಚರ್ಮರೋಗ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ಭರವಸೆ ನೀಡಿದ್ದಾರೆ.
ಸೋಮವಾರ ಗಾಂಧಿ ಜಯಂತಿ ಪ್ರಯುಕ್ತ ಆರೋಗ್ಯ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಿಂದ ಮಾಗಡಿ ರಸ್ತೆ ಕುಷ್ಠರೋಗ ಆಸ್ಪತ್ರೆಯ ರೋಗಿಗಳಿಗೆ ವಸ್ತ್ರ ಹಾಗೂ ಪರಿಕರ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನಗರದಲ್ಲಿ ಪ್ರಾದೇಶಿಕ ಚರ್ಮರೋಗ ಸಂಸ್ಥೆ ಆರಂಭವಾದರೆ ಕರ್ನಾಟಕ ರಾಜ್ಯ ಮಾತ್ರವಲ್ಲದೆ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳದಿಂದ ಬರುವ ರೋಗಿಗಳಿಗೆ ಅನುಕೂಲವಾಗಲಿದೆ. ಇಲ್ಲಿ ತಮ್ಮ ಚರ್ಮ ರೋಗಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಮತ್ತು ಮಾರ್ಗದರ್ಶನ ಪಡೆಯಬಹುದು ಎಂದು ಹೇಳಿದರು.
ಕಳೆದ ವರ್ಷ ಗಾಂಧಿ ಜಯಂತಿ ಸಂದರ್ಭದಲ್ಲಿ ಸ್ವಾಮಿ ಜಪಾನಂದಜೀ ಅವರು ಪಾವಗಡದಲ್ಲಿ ಕುಷ್ಠರೋಗಿಗಳಿಗೆ ಅಂಗವಿಕಲತೆಯನ್ನು ಸರಿಪಡಿಸುವ ಶಸ್ತ್ರ ಚಿಕಿತ್ಸೆಯು ನಡೆಯುತ್ತಿದ್ದು, ಸದರಿ ಶಸ್ತ್ರಚಿಕಿತ್ಸೆಯು ಇಲ್ಲಿನ ಆಸ್ಪತ್ರೆಯಲ್ಲಿ ನಡೆಯುವುದಾದರೆ ಹೆಚ್ಚಿನ ರೋಗಿಗಳಿಗೆ ಅನುಕೂಲವಾಗಲಿದ್ದು, ಆಸ್ಪತ್ರೆಯನ್ನು ನವೀಕರಿಸಲು ಕೋರಿದ್ದರು. ಆ ಹಿನ್ನೆಲೆಯಲ್ಲಿ ಆಸ್ಪತ್ರೆ ನವೀಕರಣಕ್ಕೆ ಅಗತ್ಯವಿರುವ ಹಣ ಬಿಡುಗಡೆ ಮಾಡಿ, ನವೀಕೃತ ಶಸ್ತ್ರಚಿಕಿತ್ಸಾಗಾರವನ್ನು ಉದ್ಘಾಟಿಸಲಾಗಿದೆ ಎಂದ ಅವರು, ಈ ಆಸ್ಪತ್ರೆಯ ಜಾಗವನ್ನು ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಆಸ್ಪದ ನೀಡದೆ ಜಾಗ ಉಳಿಸಿಕೊಂಡು ಆಸ್ಪತ್ರೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಮಾಗಡಿ ರಸ್ತೆ ಕುಷ್ಠರೋಗ ಆಸ್ಪತ್ರೆ ಆವರಣದಲ್ಲಿ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಬೀದಿ ದೀಪ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯ ವಸತಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಸ್ಥೆ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಸ್ವಾಮಿ ಜಪಾನಂದಜೀ ಮಾತನಾಡಿ, ನಗರದ ಜಯದೇವ ಹೃದ್ರೋಗ, ಮಿಂಟೋ ಕಣ್ಣಾಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ಮಾದರಿಯಲ್ಲೆ ಚರ್ಮರೋಗಕ್ಕೆ ಸಂಬಂಧಪಟ್ಟಂತೆ ಮಾಗಡಿ ರಸ್ತೆ ಕುಷ್ಠರೋಗ ಆಸ್ಪತ್ರೆಯಲ್ಲಿ ಪ್ರಾದೇಶಿಕ ಚರ್ಮರೋಗ ಸಂಸ್ಥೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚರ್ಮರೋಗ ತಜ್ಞ ಡಾ.ಪಿ.ಕೃಷ್ಣಮೂರ್ತಿ, ಆರೋಗ್ಯ ಇಲಾಖೆ ನಿರ್ದೆಶಕ ಡಾ.ಪಿ. ಎಲ್.ನಟರಾಜ್, ಜಂಟಿ ನಿರ್ದೇಶಕ ಡಾ.ಪುಷ್ಪಾರಾಜ್, ಕುಷ್ಠರೋಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಯೂಬ್ ಅಲಿಖಾನ್ ಜಾಯ್, ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್, ಡಾ.ತಿಮ್ಮರಾಜು, ವಿಜಯ ನಾಯಕ್ ಸೇರಿದಂತೆ ಇನ್ನಿತರರು ಹಾಜರಿದ್ದರು.







