ನೆದರ್‌ಲ್ಯಾಂಡ್‌ನಲ್ಲಿ ‘ಗಾಂಧಿ ಮಾರ್ಚ್’

ಆ್ಯಮ್‌ಸ್ಟರ್‌ಡ್ಯಾಮ್, ಅ.2: ಮಹಾತ್ಮಾಗಾಂಧಿಯವರ ತತ್ವಗಳಾದ ಅಹಿಂಸೆ ಹಾಗೂ ಶಾಂತಿ ತತ್ವಗಳನ್ನು ವಿಶ್ವಸಮುದಾಯಕ್ಕೆ ನೆನಪಿಸುವ ಉದ್ದೇಶದಿಂದ ಯುರೋಪ್‌ನ ರಾಷ್ಟ್ರವಾದ ನೆದರ್‌ಲ್ಯಾಂಡ್ಸ್‌ನ ರಾಜಧಾನಿ ಆ್ಯಮ್‌ಸ್ಟರ್‌ಡಾಂನಲ್ಲಿ ರವಿವಾ ನಡೆದ ‘ಗಾಂಧಿ ಮಾರ್ಚ್’ ಮೆರವಣಿಗೆಯಲ್ಲಿ ವಿವಿಧ ವಯೋಮಾನದ ಹಾಗೂ ರಾಷ್ಟ್ರೀಯತೆಗಳ 800ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ಅಹಿಂಸಾ ದಿನದ ಅಂಗವಾಗಿ ನಿನ್ನೆ ನಡೆದ ‘ಮಹಾತ್ಮನನ್ನು ಅನುಸರಿಸಿ’ ಅಭಿಯಾನದ ಅಂಗವಾಗಿ ಈ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು.
ನೆದರ್‌ಲ್ಯಾಂಡ್ಸ್‌ನಲ್ಲಿನ ಭಾರತೀಯ ರಾಯಭಾರಿ ವೇಣು ರಾಜಮಣಿ, ಹೇಗ್ ನಗರದ ಉಪಮೇಯರ್‌ಗಳಾದ ರಾಬಿನ್ ಬಲದೇವ್ ಸಿಂಗ್ ಹಾಗೂ ಕಾರ್ಸ್ಟೆನ್ ಕ್ಲೀನ್ ಅವರು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಮಹಾತ್ಮಾಗಾಂಧಿಯವರ ಜನ್ಮದಿನಾಚರಣೆಯ ಮುನ್ನಾ ದಿನ ನಡೆದ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡವರು ‘ಮಹಾತ್ಮನನ್ನು ಅನುಸರಿಸಿ’ ಅಭಿಯಾನದ ಲೋಗೋ ಇರುವ ಟೀ-ಶರ್ಟ್‌ಗಳನ್ನು ಧರಿಸಿದ್ದರು. ಅಹಿಂಸೆ, ಶಾಂತಿ ಹಾಗೂ ಮಹಾತ್ಮಾ ಗಾಂಧಿಯವರ ಬೋಧನೆಗಳನ್ನು ಪ್ರತಿಪಾದಿಸುವ ಘೋಷಣೆಗಳಿರುವ ಭಿತ್ತಿಪತ್ರಗಳನ್ನು ಅವರು ಹಿಡಿದಿದ್ದರು.
ಗೋರ್ಟೆ ಕೆರ್ಕ್‌ಗೆ ತಲುಪಿದ ಪಾದಯಾತ್ರಿಗಳು, ಮಹಾತ್ಮಾಗಾಂಧಿ ಬಳಸಿದ್ದ ಬೈಸಿಕಲ್‌ಗೆ ಗೌರವ ಸಲ್ಲಿಸಿದರು. ಈ ಬೈಸಿಕಲ್‌ನ್ನು ವಿಶೇಷ ಸದ್ಭಾವನೆಯ ಕ್ರಮವಾಗಿ ಭಾರತದ ಗಾಂಧಿ ಸ್ಮಾರಕ ಟ್ರಸ್ಟ್, ನೆದರ್‌ಲ್ಯಾಂಡ್ಸ್‌ಗೆ ಕಳುಹಿಸಿತ್ತು.
ಗಾಂಧಿಯವರ ಅಹಿಂಸಾ ಚಳವಳಿಯಿಂದ ಪ್ರೇರಿತವಾದ ಸತ್ಯಾಗ್ರಹ ಎಂಬ ಹೆಸರಿನ ನೃತ್ಯ ರೂಪಕವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.







