ಜಾತಿ ಪದ್ಧತಿ, ಅಸ್ಪಶ್ಯತೆ ಹೋಗಲಾಡಿಸಲು ಶೈಕ್ಷಣಿಕ ಪದ್ಧತಿ ಬದಲಾಗಬೇಕು: ಮೂಡ್ನಾಕೂಡು ಚಿನ್ನಸ್ವಾಮಿ

ಬೆಂಗಳೂರು, ಅ.2: ಶೈಕ್ಷಣಿಕ ಪದ್ಧತಿಯನ್ನು ಬದಲಾಯಿಸಿದಾಗ ಮಾತ್ರ ಜಾತಿಪದ್ಧತಿ, ಅಸ್ಪಶ್ಯತೆಯನ್ನು ಹೋಗಲಾಡಿಸಲು ಸಾಧ್ಯವಿದೆ ಎಂದು ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಪದ್ದಣ್ಣ ರಂಗ ತಾಲೀಮು ಕೊಠಡಿಯಲ್ಲಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಆಯೋಜಿಸಿದ್ದ ‘ನಾನು ಗೌರಿ ಲಂಕೇಶ್’ ಕಾವ್ಯ ಪ್ರತಿರೋಧ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಪಿಯುಸಿ ಓದಿದ ವಿದ್ಯಾರ್ಥಿಗಳೂ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆ ಎಂದರೆ ಏನು ಎಂದು ಪ್ರಶ್ನಿಸುತ್ತಾರೆ. ಹೀಗಾಗಿ, ಶೈಕ್ಷಣಿಕ ಪದ್ಧತಿಯನ್ನೇ ಬದಲಾಯಿಸಿ ವಿದ್ಯಾರ್ಥಿಗಳಿಗೆ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯತೆಯ ಬಗ್ಗೆ ತಿಳಿಸಿಕೊಡಬೇಕಾಗಿದೆ ಎಂದು ಹೇಳಿದರು.
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಹತ್ತನೆಯ ತರಗತಿ ವಿದ್ಯಾರ್ಥಿಗಳು ಓದುವಂತಾಗಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಕೋಮುವಾದ, ಸಾಮಾಜಿಕ ನ್ಯಾಯ, ಸಮಾನತೆಯ ಬಗ್ಗೆ ಅರಿವು ಮೂಡುತ್ತದೆ ಎಂದರು.
ಕವಿ ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ಕಾವ್ಯ ವರ್ತಮಾನದ ಎಚ್ಚರವನ್ನು ವಹಿಸಿದರೆ, ಕವಿತೆ ಮೌನದಲ್ಲಿಯೇ ಎಲ್ಲವನ್ನೂ ತಿಳಿಸಿ ಅಲ್ಲಿಯೇ ನಿಲ್ಲುತ್ತದೆ ಎಂದು ಅವರು, ಕನ್ನಡದಲ್ಲಿ ಕಾವ್ಯ ಪ್ರಯೋಗಗಳು ಹೆಚ್ಚುತ್ತಿದ್ದು, ಗೌರಿ ಲಂಕೇಶ್, ಪನ್ಸಾರೆ, ದಾಭೋಲ್ಕರ್ ಹತ್ಯೆಗಳನ್ನು ಕಾವ್ಯ ಸಾಹಿತ್ಯ ಖಂಡಿಸಿ, ಸದಾ ಎಚ್ಚರದಲ್ಲಿ ಇರುವಂತೆ ಮಾಡುತ್ತವೆ ಎಂದು ಹೇಳಿದರು.







