ಗೌರಿ ಲಂಕೇಶ್ ಹಂತಕರ ಸುಳಿವು ಸಿಕ್ಕಿದೆ: ಸಚಿವ ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ, ಅ.2: ಹಿರಿಯ ಪತ್ರಕರ್ತೆ ಗೌರಿಲಂಕೇಶ್ ಅವರ ಹತ್ಯೆ ಮಾಡಿದ ಹಂತಕರ ಸ್ಪಷ್ಟ ಸುಳಿವು ಸಿಟ್ ತಂಡಕ್ಕೆ ಸಿಕ್ಕಿದ್ದು, ಶೀಘ್ರದಲ್ಲಿಯೇ ಹಂತಕರ ಬಂಧನವಾಗಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ್ದು ಯಾರು ಮತ್ತು ಯಾಕೆ ಎಂಬ ವಿಚಾರ ಸ್ಪಷ್ಟವಾಗಿದ್ದು, ಹತ್ಯೆಗೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವಲ್ಲಿ ಎಸ್‌ಐಟಿ ತಂಡ ನಿರತವಾಗಿರುವ ಕಾರಣ ಹಂತಕರ ಬಂಧನ ತಡವಾಗುತ್ತಿದೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆ ಸಂಬಂಧ ರಾಜ್ಯಕ್ಕೆ ಅಮಿತ್ ಶಾ ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಅವರೇ ಬರಲೀ ಮತ್ತೆ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಆಧಿಕಾರಿಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡರು ಸುಖಾಸುಮ್ಮನೆ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಇಡೀ ದೇಶ ಮೋದಿ ಕೈಯಲ್ಲಿ ಸಿಲುಕಿ ನಲುಗುತ್ತಿದ್ದು, ಮೋದಿ ಅವರ ಆಡಳಿತ ನಡೆಸಿದರೆ ದೇಶದ ಅಭಿವೃದ್ಧಿ ಕುಸಿದು ಭಾರತ ಬಡ ದೇಶವಾಗಿ ಬದಲಾಗಲಿದೆ ಎಂದರು.
ಮೋದಿ ಅವರ ಆಡಳಿತದಿಂದ ಭ್ರಮನಿರಸನ ಗೊಂಡಿರುವ ದೇಶದ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಯುಪಿಎ ಸರಕಾರವನ್ನು ಅಧಿಕಾರಕ್ಕೆ ತರುವುದು ಶತಸಿದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.







