ಗಾಂಧಿ ಹತ್ಯೆಗೈದ ಮತಾಂದರಿಂದ ದ್ವೇಷದ ಗೋಡೆಗಳ ನಿರ್ಮಾಣ: ಸಿದ್ದರಾಮಯ್ಯ

ಬೆಂಗಳೂರು, ಅ.2: ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಹತ್ಯೆ ಮಾಡಿದ ಮತಾಂದರೇ ಇಂದಿಗೂ ಧರ್ಮ-ಧರ್ಮಗಳ ನಡುವೆ ದ್ವೇಷದ ಗೋಡೆಗಳನ್ನು ನಿರ್ಮಿಸುತ್ತಿದ್ದಾರೆ. ಈ ವೇಳೆ ಗಾಂಧಿ ಬದುಕಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ಕರ್ನಾಟಕ-2017’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಪ್ರೀತಿ, ಸೋದರತೆ, ಅನುಕಂಪ, ಸತ್ಯ ಮತ್ತು ಅಹಿಂಸೆಯ ಐದು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ತನ್ನ ಅಂತ್ಯದವರೆಗೂ ಯಾವುದೇ ಚ್ಯುತಿಬಾರದಂತೆ ನಡೆದುಕೊಂಡ ಮಹಾನ್ ವ್ಯಕ್ತಿ. ಅಂತಹ ಮಹಾನ್ ಚೇತನ ನಮ್ಮ ದೇಶದಲ್ಲಿ ಇನ್ನಷ್ಟು ಹೆಚ್ಚು ಕಾಲ ಬದುಕಬೇಕಿತ್ತು. ಆದರೆ, ಮತಾಂದರು ಬದುಕಲು ಬಿಡದೆ ಹತ್ಯೆ ಗೈದರು ಎಂದು ವಿಷಾದ ವ್ಯಕ್ತಪಡಿಸಿದರು.
ಹಿರಿಯ ಸ್ವಾತಂತ್ರ ಹೋರಾಟಗಾರರಾದ ದೊರೆಸ್ವಾಮಿ ಗಾಂಧಿಯ ದಾರಿಯಲ್ಲಿ ನಡೆಯುತ್ತಿದ್ದಾರೆ. ಕ್ವಿಟ್ ಇಂಡಿಯಾ ಚಳವಳಿಯಿಂದ ಆರಂಭಿಸಿ ಇದುವರೆಗೂ ನ್ಯಾಯಕ್ಕಾಗಿ, ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಅವರ ಗುರಿ ಎಲ್ಲಿಯೂ ಬದಲಾಗಿಲ್ಲ ಎಂದ ಅವರು, ನಮ್ಮ ಸರಕಾರದ ವಿರುದ್ಧವೂ ಟೀಕೆ ಮಾಡುತ್ತಾರೆ. ಆದರೆ, ಅದನ್ನು ನಾನು ಉದ್ದೇಶಪೂರ್ವಕವಲ್ಲ ಎಂದು ನಂಬಿದ್ದೇನೆ. ಅಲ್ಲದೆ, ಅವರ ಟೀಕೆಗಳನ್ನು ನಮ್ಮ ಮುಂದಿನ ನಡೆಯ ಮಾರ್ಗದರ್ಶನವೆಂದು ಭಾವಿಸಿದ್ದೇನೆ ಎಂದು ಹೇಳಿದರು.
125 ವರ್ಷ ಬದುಕಲಿ: ಅನ್ಯಾಯ ಎಲ್ಲಿದೆ ಅಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತುವ, ಅಧಿಕಾರದಲ್ಲಿರುವವರನ್ನು ಸದಾ ಎಚ್ಚರಿಸುತ್ತಿರುವ ದೊರೆಸ್ವಾಮಿಯು 125 ವರ್ಷಗಳಿಗೂ ಅಧಿಕ ವರ್ಷಗಳು ಬದುಕಬೇಕು. ಈ ಮೂಲಕ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವ ಮೂಲಕ ಸಾಮರಸ್ಯ, ಸಹಬಾಳ್ವೆಗೆ ಸಹಕಾರಿಯಾಗಬೇಕು ಎಂದರು.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಎಚ್.ಎನ್.ನಾಗಮೋಹನ್‌ದಾಸ್ ಮಾತನಾಡಿ, ಭಾರತ ದೇಶ ಬ್ರಿಟಿಷರ ಸಂಕೋಲೆಗಳಿಂದ ಬಿಡುಗಡೆಯಾಗಬೇಕು ಹಾಗೂ ದೇಶದ ಯಾರೊಬ್ಬರೂ ಹಸಿವಿನಿಂದ, ಬಡತನದಿಂದ, ಅಸಾಯಕತೆಯಿಂದ ನರಳಬಾರದು ಎಂಬ ಸಮಸಮಾನತೆಯ ಕನಸು ಕಂಡಿದ್ದವರು ಮಹಾತ್ಮಗಾಂಧಿ. ಆದರೆ, ಇಂದು ಎಲ್ಲಿ ನೋಡಿದರೂ ಬಡತನ, ಅಸಮಾನತೆ, ಅಸ್ಪೃಶ್ಯತೆ ತಾಂಡವವಾಡುತ್ತಿದೆಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜನಪರವಾಗಿರುವವರಿಗೆ ಅವಕಾಶ ನೀಡಿ. ಕಳ್ಳರನ್ನು, ಹಣವಂತರನ್ನು ತಿರಸ್ಕರಿಸಿ ಎಂದು ಸಲಹೆ ನೀಡಿದರು.
ಇದೇ ವೇಳೆ ನನಗೆ ಸರಕಾರದಿಂದ ನೀಡಿದ ಪ್ರಶಸ್ತಿ ಹಣದಲ್ಲಿ 1 ಲಕ್ಷ ರೂ. ಹೋರಾಟ ಸಮಿತಿಗೆ, 1 ಲಕ್ಷ ರೂ. ಜಯದೇವ ಹೃದ್ರೋಗ ಆಸ್ಪತ್ರೆಗೆ ಹಾಗೂ 1 ಲಕ್ಷ ರೂ.ಗಳನ್ನು ನನ್ನ ಪತ್ನಿಗೆ ನೀಡುತ್ತಿದ್ದೇನೆ ಎಂದರು.
ಈ ವೇಳೆ ಎಚ್.ಎಸ್.ದೊರೆಸ್ವಾಮಿಗೆ 5 ಲಕ್ಷ ಮೌಲ್ಯದ ಗಾಂಧಿ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್ ಇನ್ನಿತರರು ಉಪಸ್ಥಿತರಿದ್ದರು.
ದೇಶದಲ್ಲಿ ಹಿಂಸೆ, ಅಸಹಿಷ್ಣುತೆ ಜಾಸ್ತಿಯಾಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ರಾಜಕೀಯಕ್ಕೆ ಹಿಂಸಾಪ್ರವೃತ್ತಿ ಅಂಟಿಕೊಂಡಿದ್ದು, ಮಂಗಳೂರಿನಲ್ಲಿ ನಡೆಯುತ್ತಿರುವ ರಾಜಕೀಯ ಪ್ರೇರಿತ ಕೋಮುಗಲಭೆಗಳೇ ಉತ್ತಮ ಉದಾಹರಣೆಯಾಗಿದೆ.
- ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ ಹೋರಾಟಗಾರ







