ಮೂಳೆ ಹಾನಿ ತಡೆಗೆ ವಿನೂತನ ಔಷಧಿ
ಅರ್ಥರೈಟಿಸ್ ಚಿಕಿತ್ಸೆಯಲ್ಲಿ ಹೊಸ ಮೈಲುಗಲ್ಲು

ಲಂಡನ್,ಅ.2: ಅರ್ಥರೈಟಿಸ್ ಕಾಯಿಲೆಯಿಂದ ಮೂಳೆಹಾನಿ ಉಂಟಾಗುವುದನ್ನು ತಪ್ಪಿಸುವ ಹಾಗೂ ಸಂಧಿಮೂಳೆಗಳುವಿರೂಪಗೊಳ್ಳುವುದನ್ನು ತಡೆಯುವ ಸಾಮರ್ಥ್ಯವಿರುವ ನೂತನ ಔಷಧಿಯೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಎಂ1ವಿ-711 ಎಂದು ಹೆಸರಿಡಲಾದ ಈ ವಿನೂತನ ಔಷಧಿಯು, ಚಿಕಿತ್ಸೆ ಆರಂಭಗೊಂಡ ಆರು ತಿಂಗಳೊಳಗೆ ಮಂಡಿಗಳ ಸಂಧಿಯ ಸುತ್ತಲಿನ ಎಲುಬಿಗೆ ಆಗಿರುವ ಹಾನಿಯನ್ನು ಕಡಿಮೆಗೊಳಿಸುವುದು ಹಾಗೂ ಅದರಲ್ಲಿರುವ ಅಸ್ಥಿಮಜ್ಜೆಯ ದಪ್ಪವನ್ನು ಕಾಪಾಡಬಹುದೆಂಬುದನ್ನು ಸಂಶೋಧನೆಗಳು ದೃಢಪಡಿಸಿವೆ.
‘‘ಮೂಳೆಯ ಸಂರಚನೆಯ ಮೇಲೆ ಗಣನೀಯವಾದ ಪ್ರಯೋಜನವನ್ನು ಉಂಟು ಮಾಡುವಂತಹ ಔಷಧಿಯೊಂದನ್ನು ಪ್ರಪ್ರಥಮ ಬಾರಿಗೆ ನಾವು ಹೊಂದಿದಂತಾಗಿದೆ. ಇದರೊಂದಿಗೆ ಈ ಔಷಧಿಯು ಅರ್ಥರೈಟಿಸ್ ಚಿಕಿತ್ಸೆಯಲ್ಲಿ ಹೊಸ ಶಕೆಯೊಂದು ಆರಂಭಗೊಂಡಿದೆ’’ ಸಂಶೋಧನಾ ತಂಡದ ನೇತೃತ್ವ ವಹಿಸಿದ್ದ ಲೀಡ್ಸ್ ವಿವಿಯ ಪ್ರೊಫೆಸರ್ ಫಿಲಿಪ್ ಕೊನಾಗನ್ ತಿಳಿಸಿದ್ದಾರೆ.
ಮೊಣಕಾಲಿನ ಅರ್ಥರೈಟಿಸ್ (ಒಸ್ಟಿಯೊಅರ್ಥರೈಟಿಸ್)ಕಾಯಿಲೆಂದ ಬಳಲುತ್ತಿದ್ದ 40ರಿಂದ 80 ವರ್ಷ ವಯಸ್ಸಿನ 244 ರೋಗಿಗಳ ಮೇಲೆ ಈ ಔಷಧಿಯನ್ನು ನೀಡಲಾಗಿತ್ತು. ಎಂ1ವಿ-711 ಔಷಧಿಯನ್ನು ಕಡಿಮೆ ಡೋಸ್‌ನಲ್ಲಿ ಸೇವಿಸಿದವರಲ್ಲಿ ಅಸ್ಥಿಮಜ್ಜೆಯ ಪ್ರಮಾಣದ ನಷ್ಟದಲ್ಲಿ ಶೇ.70ರಷ್ಟು ಇಳಿಕೆ ಕಂಡುಬಂದಿದ್ದರೆ, ಜಾಸ್ತಿ ಪ್ರಮಾಣದಲ್ಲಿ ಸೇವಿಸಿದವರಲ್ಲಿ ಅಸ್ತಿಮಜ್ಜೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿತ್ತು.





