ಹೊಂಡ ತಪ್ಪಿಸಲು ಹೋದ ಬೈಕ್ ಪಲ್ಟಿ: ಮಗು ಮೃತ್ಯು
ಮಣಿಪಾಲ, ಅ.2: ರಸ್ತೆಯಲ್ಲಿದ್ದ ಹೊಂಡದಿಂದಾಗಿ ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ತಾಯಿಯ ಕೈಯಲ್ಲಿದ್ದ ಒಂದೂವರೆ ವರ್ಷದ ಮಗು ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಪರ್ಕಳ ಸಮೀಪ ಇಂದು ಸಂಜೆ ವೇಳೆ ನಡೆದಿದೆ.
ಉದ್ಯಾವರ ಕಲಾಯಿಬೈಲು ನಿವಾಸಿ ಉಮೇಶ್ ಪೂಜಾರಿ ಹಾಗೂ ಪ್ರಮೋದ ದಂಪತಿಯ ಏಕೈಕ ಪುತ್ರ ಚಿರಾಗ್ ಮೃತ ಮಗು. ಉಮೇಶ್ ಪೂಜಾರಿ ಕಾರ್ಕಳ ವರಂಗದಲ್ಲಿರುವ ತನ್ನ ಪತ್ನಿ ಮನೆಯಲ್ಲಿ ತೆನೆಕಟ್ಟುವ ಕಾರ್ಯ ಕ್ರಮಕ್ಕೆ ಹೋಗಿದ್ದು, ಸಂಜೆ ಅಲ್ಲಿಂದ ವಾಪಾಸ್ಸು ಮನೆಗೆ ಬೈಕಿನಲ್ಲಿ ಪತ್ನಿ ಹಾಗೂ ಮಗನೊಂದಿಗೆ ಹೊರಟಿದ್ದರು.
ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿ ರುವುದರಿಂದ ಪರ್ಕಳದ ಬಳಿ ಉಮೇಶ್ ಹೊಂಡವನ್ನು ತಪ್ಪಿಸಲು ಹೋದಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿತ್ತೆನ್ನಲಾಗಿದೆ. ಇದರ ಪರಿಣಾಮ ಬೈಕಿನ ಹಿಂಬದಿ ಯಲ್ಲಿದ್ದ ಪತ್ನಿ ಪ್ರಮೋದ ಅವರ ಕೈಯಲ್ಲಿದ್ದ ಮಗು ಜಾರಿ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿತು ಎಂದು ತಿಳಿದು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
ಸಂಪೂರ್ಣವಾಗಿ ಹದಗೆಟ್ಟು ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ಈ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದವು. ಆದರೆ ಕೇಂದ್ರ ಸರಕಾರ ಈವರೆಗೆ ಈ ರಸ್ತೆಯನ್ನು ದುರಸ್ತಿ ಮಾಡದ ಪರಿಣಾಮ ಇಂದು ಮಗುವೊಂದು ಬಲಿಯಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.







