ಬೆಳ್ತಂಗಡಿ : ಮಾತೃ ಪೂರ್ಣಯೋಜನೆ ಉದ್ಘಾಟನೆ

ಬೆಳ್ತಂಗಡಿ, ಅ.2: ಅಂಗನವಾಡಿಗಳಿಗೆ ಇನ್ನೊಬ್ಬರು ಅಡುಗೆ ಸಹಾಯಕಿಯ ಅಗತ್ಯವಿದ್ದು ಅದಕ್ಕಾಗಿ ಮುಖ್ಯ ಮಂತ್ರಿಗಳಿಗೆ ಮನವಿ ಮಾಡುವುದಾಗಿ ಶಾಸಕ, ರಾಜ್ಯ ಸಣ್ಣಕೈಗಾರಿಕಾ ನಿಗಮದಅಧ್ಯಕ್ಷ, ಕೆ ವಸಂತ ಬಂಗೇರ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ತಾಲೂಕು ಪಂ. ಸಭಾಂಗಣದಲಿ ಕರ್ನಾಟಕ ಸರ್ಕಾರ, ದ.ಕ.ಜಿ.ಪಂ., ತಾಲೂಕು ಪಂ. ಬೆಳ್ತಂಗಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಮತ್ತು ಶಿಶು ಅಭಿವೃದ್ಧಿಯೋಜನೆ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಗರ್ಭೀಣಿ ಮತ್ತು ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆಯ ಉದ್ಘಾಟಿಸಿ ಮಾತನಾಡಿದರು.
ಮಾತೃ ಪೂರ್ಣಯೋಜನೆ ಕರ್ನಾಟಕ ಸರ್ಕಾರದ ಹೊಸ ಯೋಜನೆಯಾಗಿದ್ದು, ಗರ್ಭಿಣಿ, ಮಗು ಮತ್ತು ಬಾಣಂತಿಯರ ಸಾವಿನ ಸಂಖ್ಯೆ ಕಡಿಮೆ ಯಾಗಬೇಕು, ಅವರಿಗೆ ಗುಣಮಟ್ಟದ ಪೌಷ್ಠಿಕ ಆಹಾರ ಸಿಗುವಂತಾಗಬೇಕು ಎಂಬ ಉದ್ಧೇಶದಿಂದ ಜಾರಿಗೆತಂದಿದೆ. ಈ ಯೋಜನೆಯನ್ನು ನಿರ್ಲಕ್ಷ ಮಾಡದೆ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಬಾಣಂತಿಯರಿಗೆ ಶಾಸಕ ಬಂಗೇರ ಪೌಷ್ಠಿಕ ಆಹಾರವನ್ನು ಬಡಿಸಿ ಯೋಜನೆಗೆ ಚಾಲನೆ ನೀಡಿದರು.
ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂ. ಅಧ್ಯಕ್ಷೆ ದಿವ್ಯಜ್ಯೋತಿ ವಹಿಸಿದ್ದರು. ವೇದಿಕೆಯಲ್ಲಿ ತಹಶೀಲ್ದಾರ್ ಮಹಮ್ಮದ್‌ಇಸಾಕ್, ತಾಲೂಕು ಪಂ. ಕಾರ್ಯ ನಿರ್ವಹಣಾಧಿಕಾರಿ ಬಸವರಾಜ್ ಕೆ.ಎನ್. ಅಣ್ಣನವರ್, ಜಿ.ಪಂ.ಸದಸ್ಯ ಧರಣೇಂದ್ರಕುಮಾರ್, ತಾಲೂಕು ಪಂ. ಸದಸ್ಯರಾದ ಕೃಷ್ಣಯ್ಯ ಆಚಾರ್, ಓಬಯ್ಯ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಲಕ್ಷ್ಮಣ್ ಶೆಟ್ಟಿ, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಗುಣಮ್ಮ ಉಪಸ್ಥಿತರಿದ್ದರು.
ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಪ್ರಿಯಾ ಆಗ್ನೆಸ್ ಸ್ವಾಗತಿಸಿದರು. ಮೇಲ್ವಿಚಾರಕರಾದ ಸುಧಾ ಕೆ ಕಾರ್ಯಕ್ರಮ ನಿರೂಪಿಸಿ, ರತ್ನಾವತಿ ವಂದಿಸಿದರು.







