'ಮಾತೃಪೂರ್ಣ' ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ತುಮಕೂರು, ಅ.2: ಕಾನೂನು, ಸಂಸದೀಯ, ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಜಿಲ್ಲೆಯ ಗರ್ಭಿಣಿ, ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟ ಒದಗಿಸುವ ಮಾತೃಪೂರ್ಣ ಯೋಜನೆ ಸೋಮವಾರ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಗರದ ಬಾಲಭವನದಲ್ಲಿಂದು ಏರ್ಪಡಿಸಿದ್ದ ಜಿಲ್ಲಾ ಮಟ್ಟದ 'ಮಾತೃಪೂರ್ಣ' ಯೋಜನೆ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಡಿ ಹೆರಿಗೆ ಸಮಯದಲ್ಲಿ ಸಂಭವಿಸುವ ತಾಯಿ ಮತ್ತು ಶಿಶು ಮರಣಗಳನ್ನು ತಪ್ಪಿಸಲು ಅಂಗನವಾಡಿ ಕೇಂದ್ರಗಳ ಮೂಲಕ ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುವುದು. ಬಡ ಹಾಗೂ ಗ್ರಾಮೀಣ ಪ್ರದೇಶದ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರವಿಲ್ಲದೆ ರಕ್ತಹೀನತೆ ಹಾಗೂ ಅಪೌಷ್ಟಿಕತೆಗೆ ತುತ್ತಾಗುವ ಸಂಭವವಿರುವುದರಿಂದ ತಾಯಂದಿರ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯವಂತ ಮಗು ಜನಿಸಬೇಕೆನ್ನುವ ಉದ್ದೇಶದಿಂದ ಈ ಮಹತ್ವಪೂರ್ಣ ಯೋಜನೆಯನ್ನು ಸರಕಾರ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ವಿಶೇಷ ಯೋಜನೆ: ರಾಜ್ಯವನ್ನು ಹಸಿವು ಮುಕ್ತಗೊಳಿಸಲು ರಾಜ್ಯದ 4 ಕೋಟಿ ಜನರಿಗೆ ಉಚಿತ ಅಕ್ಕಿ ನೀಡುತ್ತಿರುವ ಅನ್ನಭಾಗ್ಯ,ಶಾಲಾ ಮಕ್ಕಳ ಆರೋಗ್ಯ ವೃದ್ಧಿಗಾಗಿ ತಲಾ 200 ಮಿ.ಲೀ ಹಾಲನ್ನು ಒದಗಿಸುತ್ತಿರುವ ಕ್ಷೀರಭಾಗ್ಯ ಯೋಜನೆ ಗಳಂತೆ ಮಾತೃಪೂರ್ಣ ಯೋಜನೆಯು ವಿಶೇಷವಾಗಿದೆ.ರಾಜ್ಯವನ್ನು ಹೊರತುಪಡಿಸಿ ಬೇರ್ಯಾವ ರಾಜ್ಯದಲ್ಲಿಯೂ ಇಂಥ ಯೋಜನೆಯನ್ನು ರೂಪಿಸಿಲ್ಲವೆಂದ ಅವರು, ಜಿಲ್ಲೆಯ ಮಧುಗಿರಿ ಹಾಗೂ ಬಾಗಲಕೋಟೆ ಸೇರಿದಂತೆ 4 ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿ ವೈಜ್ಞಾನಿಕ ಸಮಸ್ಯೆಗಳನ್ನು ಅರಿತು ಇಂದಿನಿಂದ ರಾಜ್ಯಾದ್ಯಂತ ಜಾರಿಗೆ ತರಲಾಗುತ್ತಿದೆ ಎಂದರು.
ಅಂಗನವಾಡಿಯೆಂಬ ಕೀಳು ಭಾವನೆ ಬೇಡ: ಅಂಗವಾಡಿಗೆ ಹೋಗಿ ಊಟ ಮಾಡಿದರೆ ಅವಮಾನವೆಂಬ ಕೀಳು ಭಾವನೆ ಬೇಡ. ಹೊಟ್ಟೆ ತುಂಬಾ ತಿಂದಾಕ್ಷಣ ಪೌಷ್ಟಿಕತೆ ಬರುವುದಿಲ್ಲ. ಪೌಷ್ಟಿಕಾಂಶ, ಕಬ್ಬಿಣಾಂಶ, ಲವಣಾಂಶಗಳಿಂದ ಕೂಡಿದ ಸತ್ವಯುತ ಆಹಾರವನ್ನು ಸೇವಿಸಿದಾಗ ಮಾತ್ರ ಆರೋಗ್ಯವಂತ ಮಗುವಿಗೆ ಜನನ ನೀಡಬಹುದು.ಈ ನಿಟ್ಟಿನಲ್ಲಿ ತಾಯಂದಿರಿಗೆ ಪ್ರತೀ ದಿನ ಬಿಸಿಯೂಟದ ಮೂಲಕ 1198 ಕ್ಯಾಲೋರಿ, 37 ಗ್ರಾಂ ಪ್ರೋಟೀನ್ ಹಾಗೂ 578 ಮಿಲಿಗ್ರಾಂ ಕ್ಯಾಲ್ಸಿಯಂಯುತ ಆಹಾರ ನೀಡುವುದಲ್ಲದೆ ಕಬ್ಬಿಣಾಂಶದ ಮಾತ್ರೆಗಳನ್ನು ಸಹ ನೀಡಲಾಗುವುದೆಂದರು.
ಹೆಸರು ನೋಂದಾಯಿಸಿ: ಗರ್ಭಿಣಿ, ಬಾಣಂತಿಯರು ತನ್ನ ಗಂಡನ ಮನೆ, ತವರು ಮನೆ ಅಥವಾ ತಾನು ವಾಸಿಸುತ್ತಿರುವ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಹೆಸರನ್ನು ನೋಂದಾಯಿಸಿ ಯೋಜನೆಯ ಲಾಭ ಪಡೆಯಬಹುದು. ಜಿಲ್ಲೆಯ 4095 ಅಂಗನವಾಡಿ ಕೇಂದ್ರಗಳಲ್ಲಿ 36,841 ಗರ್ಭಿಣಿ, ಬಾಣಂತಿಯರು ಬಿಸಿಯೂಟದ ಪ್ರಯೋಜನ ಪಡೆಯಲಿದ್ದಾರೆ ಎಂದು ವಿವರಿಸಿದರು.
ಗಾಂಧೀಜಿಯ ಕನಸು ನನಸು: ಸಂಸದ ಮುದ್ದ ಹನುಮೇಗೌಡ ಮಾತನಾಡಿ, ಗಾಂಧೀ ಜಯಂತಿಯಂದು ಈ ಯೋಜನೆಗೆ ಚಾಲನೆ ದೊರೆತಿರುವುದು ಅರ್ಥಪೂರ್ಣ.ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವತ್ತ ಮತ್ತೊಂದು ಹೆಜ್ಜೆಯಿಟ್ಟ ಸರ್ಕಾರದ ಈ ಯೋಜನೆಯು ಆರೋಗ್ಯವಂತ ದೇಶಕ್ಕೆ ಕೊಡುಗೆಯಾಗಿದೆ. ಬಡತನ,ಬಡತನ ರೇಖೆಗಿಂತ ಕೆಳಗಿನ, ಮಧ್ಯಮವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಯನ್ನು ರೂಪಿಸಲಾಗಿದೆ. ಅಂಗವಾಡಿ ಮೂಲಕ ರಾಜ್ಯದ 58.50 ಲಕ್ಷ ಮಕ್ಕಳು ಸೇರಿ 70 ಲಕ್ಷ ಗರ್ಭಿಣಿ, ಬಾಣಂತಿಯರಿಗೆ ಯೋಜನೆ ಲಭ್ಯವಾಗಲಿದ್ದು, ಇಲ್ಲಿ ದೊರೆಯುವ ಪೌಷ್ಠಿಕಯುಕ್ತ ಆಹಾರ ಸೇವಿಸಿ ಆರೋಗ್ಯವಂತ ದೇಶಕ್ಕೆ ನಾಂದಿಯಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಮಾತನಾಡಿ, ಶ್ರೀಮಂತರ ಮಕ್ಕಳಂತೆ ಬಡ ಮಕ್ಕಳಿಗೂ ಉತ್ತಮ ಆಹಾರ ದೊರಕಿಸಿಕೊಡಬೇಕೆಂಬ ದೃಷ್ಟಿಯಿಂದ ಯೋಜನೆಯನ್ನು ರೂಪಿಸಲಾಗಿದೆ. ನೋಂದಣಿಯಾದ ಗರ್ಭಿಣಿ ಹಾಗೂ ಹೆರಿಗೆಯಾದ 6 ತಿಂಗಳವರೆಗಿನ ಬಾಣಂತಿಯರು ಮಾತ್ರ ಮಾತೃಪೂರ್ಣ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ತಾಯಿಯ ಪೌಷ್ಟಿಕ ಆಹಾರ ಮಗುವಿನ ಬೆಳವಣಿಗೆಗೆ ಆಧಾರವಾಗಿದ್ದು, ಗರ್ಭಿಣಿ ಹಾಗೂ ಬಾಣಂತಿಯರು ಆರೋಗ್ಯವನ್ನು ನಿರ್ಲಕ್ಷಿಸದೆ ಉತ್ತಮ ಆಹಾರ ಸೇವಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಜಯಲಕ್ಷ್ಮಮ್ಮ, ಅಪರ ಜಿಲ್ಲಾಧಿಕಾರಿ ಸಿ. ಅನಿತಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪ್ರಕಾಶ, ಡಿಎಚ್‍ಒ ಡಾ. ರಂಗಸ್ವಾಮಿ, ಡಿಡಿಪಿಐ ಮಂಜುನಾಥ, ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕಿ ವಿಜಯಕುಮಾರಿ ಉಪಸ್ಥಿತರಿದ್ದರು.







