ಗಾಂಧೀಜಿಯವರ ಆದರ್ಶ ಜೀವನ ಇಂದಿನ ಯುವ ಜನಾಂಗಕ್ಕೆ ದಾರಿದೀಪ: ಸಚಿವ ಮಲ್ಲಿಕಾರ್ಜುನ

ದಾವಣಗೆರೆ, ಅ.2: ಅಹಿಂಸೆ ತತ್ವದ ಮೂಲಕ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ಮಹಾತ್ಮಾ ಗಾಂಧೀಜಿ ಹಗೂ ಜೈ ಜವಾನ್ ಜೈ ಕಿಸಾನ್ ಘೋಷಣೆಯಿಂದ ದೇಶಕ್ಕೆ ಶಕ್ತಿ ತುಂಬಿದವರು ಲಾಲ್ ಬಹಾದ್ದೂರ್ ಶಾಸ್ತ್ರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ಮಹಾನಗರ ಪಾಲಿಕೆ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಸರಳ ಜೀವನಕ್ಕೆ ನಾಂದಿ ಹಾಡಿದವರು ಮಹಾತ್ಮಾ ಗಾಂಧೀಜಿಯವರು. ಅವರ ಆದರ್ಶ ಜೀವನ ಇಂದಿನ ಯುವ ಜನಾಂಗಕ್ಕೆ ದಾರಿದೀಪವಾಗಿದೆ. ಇಂದಿನ ಜಾಗತೀಕ ದಿನಮಾನಗಳಲ್ಲಿ ಮಹಾತ್ಮಾ ಗಾಂಧೀಜಿ ಆದರ್ಶಗಳು ಹಾಗೂ ಅವರು ಹಾಕಿಕೊಟ್ಟ ಮೌಲ್ಯಗಳು ಅಗತ್ಯವಾಗಿವೆ. ಸತ್ಯ, ಅಹಿಂಸೆ ಹಾಗೂ ಸರಳ, ಸಜ್ಜನಿಕೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯವರ ಜೀವನವೇ ಒಂದು ಮಹಾನ್ ಯಶೋಗಾಥೆಯಾಗಿದೆ ಎಂದರು.
ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಶ್ರೀ ಮಾತನಾಡಿ, ದೇಶಕ್ಕೆ ಆದರ್ಶ ಮೌಲ್ಯ ಕೊಡುಗೆಯಾಗಿ ನೀಡಿದವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ. ಅವರು ನೀಡಿದ ಕೊಡುಗೆಗಳು ಸರ್ವಕಾಲಿಕವಾಗಿವೆ ಎಂದರು.
ಇಸ್ಲಾಂ ಧರ್ಮಗುರು ಮೌಲಾನಾ ಇಬ್ರಾಹೀಂ ಸಖಾಫಿ ಮಾತನಾಡಿ, ಹಿಂಸೆಯಿಂದ ಗೆಲುವು ಅಸಾಧ್ಯವೆಂದು ಅರಿತು ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದವರು ಗಾಂಧಿಜಿ. ಗಾಂಧಿಯವರಲ್ಲಿ ಮೊಹ್ಮದ್ ಪೈಗಂಬರ್‍ರ ಸ್ಥೈರ್ಯ ಗುಣಗಳಿದ್ದವು. ನೀವು ಇತರರ ಮೇಲೆ ದಯೆ ತೋರಿದರೆ ನಿಮ್ಮ ಮೇಲೆ ಭಗವಂತನು ದಯೆ ತೋರುವನು ಎಂದು ಮೊಹಮ್ಮದ ಪೈಗಂಬರರು ನುಡಿದಿದ್ದಾರೆ. ಇಂತವರ ಗುಣ ಒಗ್ಗೂಡಿದ ವ್ಯಕ್ತಿತ್ವ ಗಾಂಧಿಜಿಯವರದಾಗಿತ್ತು ಎಂದು ತಿಳಿಸಿದರು.
ಸೇಂಟ್ ಥಾಮಸ್ ಚರ್ಚ್‍ನ ರೆವರೆಂಡ್ ಸ್ಟೀವನ್ ಡೆಸಾ ಮಾತನಾಡಿ, ಮಹಾತ್ಮಾ ಗಾಂಧೀಜಿ ಆದರ್ಶ ಮೌಲ್ಯಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಬೇಕು. ಪೊರಕೆ ಹಿಡಿದು ಕಸ ಗೂಡಿಸುವುದು ಒಂದು ಸಂಕೇತವಾಗಿದೆ. ಆದರೆ, ಸ್ವಚ್ಛತೆ ಎನ್ನುವುದು ನಮ್ಮ ಜೀವನದ ಪ್ರತಿಯೊಂದು ಕಾರ್ಯದಲ್ಲಿಯೂ ಇರಬೇಕು. ಮಹಾತ್ಮರ ಆದರ್ಶ ಮೈಗೂಡಿಸಿಕೊಂಡು ರಾಮರಾಜ್ಯದ ಕನಸನ್ನು ಸಾಕಾರಗೊಳಿಸೋಣ ಎಂದು ಹೇಳಿದರು.
ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ಗಾಂಧೀಜಿಯವರ ಕುರಿತಾತ ವಿಶೇಷ ಜನಪದ ಸಂಚಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣ್ಯರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ವಿ ಲಲಿತ್‍ಕುಮಾರ್ ಜೈನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕಡಾ. ಗಂಗಾಧರಯ್ಯ ಹಿರೇಮಠ ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕ್‍ಕುಮಾರ್ ಡಿ. ಸ್ವಾಗತಿಸಿದರು. ಪಾಲಿಕೆ ಮಹಾಪೌರರಾದ ಅನಿತಾಬಾಯಿ ಮಾಲತೇಶ, ವಿಪ ಶಾಸಕ ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಪಾಲಿಕೆ ಆಯುಕ್ತ ಬಿ.ಹೆಚ್. ನಾರಾಯಣಪ್ಪ, ತಹಶೀಲ್ದಾರ್ ಸಂತೋಷ ಕುಮಾರ ಹಾಜರಿದ್ದರು.







