ಮೊದಲ ಟೆಸ್ಟ್: ಶ್ರೀಲಂಕಾಕ್ಕೆ ರೋಚಕ ಜಯ
ರಂಗನ ಹೆರಾತ್ ಸ್ಪಿನ್ ಮೋಡಿಗೆ ಪಾಕ್ ನಿರುತ್ತರ

ಅಬುಧಾಬಿ, ಅ.2: ಹಿರಿಯ ಸ್ಪಿನ್ ಬೌಲರ್ ರಂಗನ ಹೆರಾತ್‌ರ ಅಮೋಘ ಬೌಲಿಂಗ್ ಸಹಾಯದಿಂದ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 21 ರನ್‌ಗಳ ಅಂತರದಿಂದ ರೋಚಕವಾಗಿ ಗೆದ್ದುಕೊಂಡಿದೆ.
ಐದನೆ ಹಾಗೂ ಅಂತಿಮ ದಿನದಾಟವಾದ ಸೋಮವಾರ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ 136 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡ ಎಡಗೈ ಸ್ಪಿನ್ನರ್ ಹೆರಾತ್ ದಾಳಿಗೆ(6-43) ತತ್ತರಿಸಿ ಕೇವಲ 114 ರನ್‌ಗೆ ಆಲೌಟಾಯಿತು.
ಪಾಕ್‌ಗೆ ಗೆಲುವನ್ನು ನಿರಾಕರಿಸಿದ ಹೆರಾತ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 400 ವಿಕೆಟ್ ಪಡೆದ ಮೊದಲ ಎಡಗೈ ಬೌಲರ್ ಎಂಬ ಕೀರ್ತಿಗೂ ಭಾಜನರಾದರು. ಹೆರಾತ್ 400ಕ್ಕೂ ಅಧಿಕ ವಿಕೆಟ್ ಪಡೆದಿರುವ ಶ್ರೀಲಂಕಾದ ಎರಡನೆ ಬೌಲರ್ ಆಗಿದ್ದಾರೆ. ಹೆರಾತ್ ಪಾಕ್ ಆಟಗಾರ ಮುಹಮ್ಮದ್ ಅಬ್ಬಾಸ್ ವಿಕೆಟ್ ಉಡಾಯಿಸುವ ಮೂಲಕ ಶ್ರೀಲಂಕಾಕ್ಕೆ ಅನಿರೀಕ್ಷಿತ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಶ್ರೀಲಂಕಾ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಪಾಕ್ ತಂಡಕ್ಕೆ ಸ್ಪಿನ್ ದಾಳಿಯ ಮೂಲಕ ಸದಾಕಾಲ ಕಾಡುವ ಹೆರಾತ್ ಪಾಕ್ ವಿರುದ್ಧ ಆಡಿರುವ 20 ಪಂದ್ಯಗಳಲ್ಲಿ 100 ವಿಕೆಟ್ ಪೂರೈಸಿದರು. ಪಾಕ್ ಇನಿಂಗ್ಸ್‌ನಲ್ಲಿ ಚೊಚ್ಚಲ ಪಂದ್ಯವಾಡಿರುವ ಹಾರಿಸ್ ಸೊಹೈಲ್(34 ರನ್) ಒಂದಷ್ಟು ಹೋರಾಟ ನೀಡಿದರು.
ಶ್ರೀಲಂಕಾ ತಂಡ 2ನೆ ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಎದುರಾಳಿ ತಂಡಕ್ಕೆ ಗೆಲ್ಲಲು ಸುಲಭ ಗುರಿ ನೀಡಿದರೂ ಗೆಲುವು ಸಾಧಿಸಲು ಯಶಸ್ವಿಯಾಗಿದೆ. ಈ ಹಿಂದೆ 2009ರಲ್ಲಿ ಪಾಕ್ ವಿರುದ್ಧವೇ 168 ರನ್ ಗುರಿ ನೀಡಿ ಗೆಲುವು ಸಾಧಿಸಿತ್ತು. ಪಾಕ್ ತಂಡ ಅಬುಧಾಬಿಯಲ್ಲಿ ಆಡಿರುವ 10 ಟೆಸ್ಟ್ ಪಂದ್ಯಗಳ ಪೈಕಿ ಮೊದಲ ಬಾರಿ ಸೋಲನುಭವಿಸಿದೆ.
ಶ್ರೀಲಂಕಾ 138 ರನ್‌ಗೆ ಆಲೌಟ್: ಇದಕ್ಕೆ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 69 ರನ್‌ನಿಂದ ಎರಡನೆ ಇನಿಂಗ್ಸ್ ಮುಂದುವರಿಸಿದ ಶ್ರೀಲಂಕಾ ತಂಡ ಪಾಕ್‌ನ ಲೆಗ್-ಸ್ಪಿನ್ನರ್ ಯಾಸಿರ್ ಶಾ(5-51) ಸ್ಪಿನ್ ಮೋಡಿಗೆ ಸಿಲುಕಿ 138 ರನ್‌ಗೆ ಆಲೌಟಾಯಿತು. ಶ್ರೀಲಂಕಾ ಪರ ನಿರೊಶನ್ ಡಿಕ್ವೆಲ್ಲಾ(40) ಸರ್ವಾಧಿಕ ರನ್ ಗಳಿಸಿ ಪಾಕ್ ಗೆಲುವಿಗೆ 136 ರನ್ ಗುರಿ ನೀಡಲು ನೆರವಾದರು.
ದಿಢೀರ್ ಕುಸಿತ ಕಂಡ ಪಾಕ್: ಗೆಲುವಿಗೆ ಸುಲಭ ಸವಾಲು ಪಡೆದಿದ್ದ ಪಾಕ್ ತಂಡ ಕಳಪೆ ಆರಂಭ ಪಡೆದಿತ್ತು. ಪಾಕ್‌ನ ಆರಂಭಿಕ ಆಟಗಾರ ಸಮಿ ಅಸ್ಲಂ ವಿಕೆಟ್ ಪಡೆದ ಹೆರಾತ್ ಲಂಕೆಗೆ ಆರಂಭದಲ್ಲೇ ಮೇಲುಗೈ ಒದಗಿಸಿಕೊಟ್ಟರು.
ಪಾಕ್‌ನ ಮೊದಲ ಇನಿಂಗ್ಸ್‌ನಲ್ಲಿ 93 ರನ್‌ಗೆ 5 ವಿಕೆಟ್ ಪಡೆದಿದ್ದ ಹೆರಾತ್ ಎರಡನೆ ಇನಿಂಗ್ಸ್‌ನಲ್ಲೂ ಸಿಂಹಸ್ವಪ್ನರಾದರು. ಶಾನ್ ಮಸೂದ್(7) ಹಾಗೂ ಬಾಬರ್ ಆಝಂ(3) ಔಟಾದಾಗ ಪಾಕ್ ಸ್ಕೋರ್ 4 ವಿಕೆಟ್ ನಷ್ಟಕ್ಕೆ 32.
ಹಾರಿಸ್ ಸೊಹೈಲ್(34) ಹಾಗೂ ಸರ್ಫರಾಝ್ ಅಹ್ಮದ್(19) 6ನೆ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾಗುವ ಪ್ರಯತ್ನ ನಡೆಸಿದರು. ಪಾಕ್ ನಾಯಕ ಅಹ್ಮದ್ ವಿಕೆಟ್ ಕಬಳಿಸಿದ ಹೆರಾತ್ ಈ ಜೋಡಿಯನ್ನು ಬೇರ್ಪಡಿಸಿದರು. ಸೊಹೈಲ್-ಅಹ್ಮದ್ ಬೇರ್ಪಟ್ಟ ಬಳಿಕ ಕುಸಿತದ ಹಾದಿ ಹಿಡಿದ ಪಾಕ್ 47.4 ಓವರ್‌ಗಳಲ್ಲಿ 114 ರನ್‌ಗೆ ಆಲೌಟಾಯಿತು.
ಸಂಕ್ಷಿಪ್ತ ಸ್ಕೋರ್
►ಶ್ರೀಲಂಕಾ ಮೊದಲ ಇನಿಂಗ್ಸ್: 419
►ಪಾಕಿಸ್ತಾನ ಮೊದಲ ಇನಿಂಗ್ಸ್: 422
►ಶ್ರೀಲಂಕಾ ಎರಡನೆ ಇನಿಂಗ್ಸ್: 138
►ಪಾಕಿಸ್ತಾನ ಎರಡನೆ ಇನಿಂಗ್ಸ್: 134







