400 ವಿಕೆಟ್ ಪಡೆದ ಮೊದಲ ಎಡಗೈ ಸ್ಪಿನ್ನರ್ ಹೆರಾತ್

ಅಬುಧಾಬಿ, ಅ.2: ಶ್ರೀಲಂಕಾದ ಎಡಗೈ ಸ್ಪಿನ್ನರ್ ರಂಗನ ಹೆರಾತ್ ಪಾಕ್ ಆಟಗಾರ ಮುಹಮ್ಮದ್ ಅಬ್ಬಾಸ್ ವಿಕೆಟ್ ಪಡೆಯುವುದರೊಂದಿಗೆ ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ 400 ವಿಕೆಟ್ ಪಡೆದ ಮೊದಲ ಎಡಗೈ ಸ್ಪಿನ್ನರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಹೆರಾತ್ ಪಾಕ್ ವಿರುದ್ಧದ ಮೊದಲ ಪಂದ್ಯಕ್ಕಿಂತ ಮೊದಲು 389 ವಿಕೆಟ್ ಪಡೆದಿದ್ದರು.
ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದ ಹೆರಾತ್ ಎರಡನೆ ಇನಿಂಗ್ಸ್ ನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದರು. ಪಂದ್ಯದಲ್ಲಿ ಒಟ್ಟು 11 ವಿಕೆಟ್‌ಗಳನ್ನು ಕಬಳಿಸಿರುವ ಹೆರಾತ್ 400 ವಿಕೆಟ್ ಕ್ಲಬ್‌ಗೆ ಸೇರ್ಪಡೆಯಾದರು. ತನ್ನ 84ನೆ ಟೆಸ್ಟ್‌ನಲ್ಲಿ 400 ವಿಕೆಟ್ ಪೂರೈಸಿದ ಹೆರಾತ್ ಅತ್ಯಂತ ವೇಗವಾಗಿ ಈ ಮೈಲುಗಲ್ಲು ತಲುಪಿದ ವಿಶ್ವದ ನಾಲ್ಕನೆ ಬೌಲರ್ ಎನಿಸಿಕೊಂಡರು.ಭಾರತದ ಅನಿಲ್ ಕುಂಬ್ಳೆ(85 ಟೆಸ್ಟ್), ಆಸ್ಟ್ರೇಲಿಯದ ಗ್ಲೆನ್ ಮೆಕ್‌ಗ್ರಾತ್(87 ಟೆಸ್ಟ್) ಹಾಗೂ ಶೇನ್ ವಾರ್ನ್(92 ಟೆಸ್ಟ್)ಸಾಧನೆಯನ್ನು ಹಿಂದಿಕ್ಕಿದರು. ಹೆರಾತ್‌ರ ಮಾಜಿ ಸಹ ಆಟಗಾರ ಮುತ್ತಯ್ಯ ಮುರಳೀಧರನ್ ಕೇವಲ 72 ಪಂದ್ಯಗಳಲ್ಲಿ 400 ವಿಕೆಟ್‌ಗಳನ್ನು ಕಬಳಿಸಿರುವ ಸಾಧನೆ ಮಾಡಿದ್ದಾರೆ. ಕಿವೀಸ್ ದಂತಕತೆ ರಿಚರ್ಡ್ ಹ್ಯಾಡ್ಲಿ ಹಾಗೂ ದಕ್ಷಿಣ ಆಫ್ರಿಕದ ‘ಸ್ಪೀಡ್ ಗನ್’ ಡೇಲ್ ಸ್ಟೇಯ್ನಿ 80ನೆ ಟೆಸ್ಟ್ ಪಂದ್ಯದಲ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಹೆರಾತ್ ಪಂದ್ಯವೊಂದರಲ್ಲಿ 9ನೆ ಬಾರಿ 10 ವಿಕೆಟ್ ಗೊಂಚಲು ಹಾಗೂ 33ನೆ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.





