ಫಿಫಾ ಅಂಡರ್-17 ವಿಶ್ವಕಪ್: ಇರಾಕ್, ಅಮೆರಿಕ ತಂಡಗಳ ಆಗಮನ

ಕೋಲ್ಕತಾ, ಅ.2: ಭಾರತದಲ್ಲಿ ಇದೇ ಮೊದಲ ಬಾರಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಭಾಗವಹಿಸಲು ವಿಶ್ವದ ವಿವಿಧ ಭಾಗಗಳಿಂದ ತಂಡಗಳು ಆಗಮಿಸುತ್ತಿವೆ.
ಅ.6 ರಿಂದ ಆರಂಭವಾಗಲಿರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು 21 ಸದಸ್ಯರನ್ನು ಒಳಗೊಂಡ ಇರಾಕ್ ತಂಡ ಕತರ್ ಏರ್‌ವೇಸ್‌ನಲ್ಲಿ ಸೋಮವಾರ ಬೆಳಗ್ಗಿನ ಜಾವ ಕೋಲ್ಕತಾ ತಂಡಕ್ಕೆ ಆಗಮಿಸಿದೆ.
2013ರಲ್ಲಿ ಮೊದಲ ಬಾರಿ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ ಏಷ್ಯನ್ ಚಾಂಪಿಯನ್ ಇರಾಕ್ ಅ.18 ರಂದು ಸಾಲ್ಟ್‌ಲೇಕ್ ಸ್ಟೇಡಿಯಂನಲ್ಲಿ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಮೆಕ್ಸಿಕೊ ತಂಡವನ್ನು ಎದುರಿಸಲಿದೆ.
‘ಎಫ್’ ಗುಂಪಿನಲ್ಲಿ ಬಲಿಷ್ಠ ತಂಡಗಳಾದ ಮೆಕ್ಸಿಕೊ, ಚಿಲಿ ಹಾಗೂ ಇಂಗ್ಲೆಂಡ್ ತಂಡಗಳೊಂದಿಗೆ ಸ್ಥಾನ ಪಡೆದಿರುವ ಇರಾಕ್‌ಗೆ ಕಠಿಣ ಸವಾಲು ಎದುರಾಗಿದೆ.
ಇರಾಕ್ ತಂಡ 2013ರಲ್ಲಿ ತಾನಾಡಿದ್ದ ಎಲ್ಲ 3 ಗ್ರೂಪ್ ಪಂದ್ಯಗಳಲ್ಲಿ ಸ್ವೀಡನ್, ಮೆಕ್ಸಿಕೊ ಹಾಗೂ ನೈಜೀರಿಯ ವಿರುದ್ಧ ಶರಣಾಗಿತ್ತು.
ಇರಾಕ್ ತಂಡ 2016ರ ಎಎಫ್‌ಸಿ ಅಂಡರ್-16 ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಇರಾನ್ ತಂಡವನ್ನು ಮಣಿಸುವ ಮೂಲಕ ಮೊದಲ ಬಾರಿ ಏಷ್ಯನ್ ಚಾಂಪಿಯನ್ ಎನಿಸಿಕೊಂಡಿತ್ತು. ಅಂಡರ್-17 ವಿಶ್ವಕಪ್‌ಗೂ ಅರ್ಹತೆ ಪಡೆದುಕೊಂಡಿತ್ತು.
ಎಲ್ಲರ ಕಣ್ಣು 16ರ ಹರೆಯದ ಮುಹಮ್ಮದ್ ದಾವೂದ್ ಮೇಲಿದೆ. ದಾವೂದ್ 2016ರ ಇರಾನ್‌ನ ಐತಿಹಾಸಿಕ ಸಾಧನೆಗೆ ಮಹತ್ವದ ಕಾಣಿಕೆ ನೀಡಿದ್ದರು.
ಹೊಸದಿಲ್ಲಿಗೆ ಅಮೆರಿಕ ಫುಟ್ಬಾಲ್ ತಂಡ ಆಗಮನ: 21 ಆಟಗಾರರನ್ನು ಒಳಗೊಂಡಿರುವ ಅಮೆರಿಕದ ಫುಟ್ಬಾಲ್ ತಂಡ ಸೋಮವಾರ ಹೊಸದಿಲ್ಲಿಗೆ ಆಗಮಿಸಿತು. ಜಾನ್ ಹಾಕ್‌ವರ್ತ್ ಕೋಚಿಂಗ್‌ನಲ್ಲಿ ಪಳಗಿರುವ ಅಮೆರಿಕ ರವಿವಾರ ರಾತ್ರಿ 10 ಗಂಟೆಗೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ದುಬೈನಲ್ಲಿ ಏಳು ದಿನಗಳ ಶಿಬಿರದಲ್ಲಿ ಭಾಗವಹಿಸಿದ್ದ ಅಮೆರಿಕ ತಂಡ ದುಬೈನಿಂದ ನೇರವಾಗಿ ಹೊಸದಿಲ್ಲಿಗೆ ತಲುಪಿದೆ.
ಅಮೆರಿಕ ತಂಡ ‘ಎ’ ಗುಂಪಿನಲ್ಲಿ ಆತಿಥೇಯ ಭಾರತ, ಕೊಲಂಬಿಯಾ ಹಾಗೂ ಘಾನಾ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಅಕ್ಟೋಬರ್ 6 ರಂದು ಭಾರತ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಅ.9ಕ್ಕೆ ಘಾನಾ ಹಾಗೂ ಅ.12 ರಂದು ಕೊಲಂಬಿಯಾ ತಂಡವನ್ನು ಎದುರಿಸಲಿದೆ.
ಅಮೆರಿಕ ಮೊದಲೆರಡು ಗ್ರೂಪ್ ಪಂದ್ಯಗಳನ್ನು ಹೊಸದಿಲ್ಲಿಯ ಜವಾಹರ್‌ಲಾಲ್ ನೆಹರೂ ಸ್ಟೇಡಿಯಂನಲ್ಲಿ ಹಾಗೂ ಕೊನೆಯ ಗ್ರೂಪ್ ಪಂದ್ಯವನ್ನು ನವಿಮುಂಬೈನ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಆಡಲಿದೆ.
ಅಮೆರಿಕದ 21 ಆಟಗಾರರ ಪೈಕಿ 12 ಆಟಗಾರರಿಗೆ ಪ್ರಮುಖ ಲೀಗ್ ಫುಟ್ಬಾಲ್ ಕ್ಲಬ್‌ಗಳಲ್ಲಿ ಆಡಿರುವ ಅನುಭವವಿದೆ. ಅಮೆರಿಕ ತಂಡ ಫಿಫಾ ಅಂಡರ್-17 ವಿಶ್ವಕಪ್‌ನ 16 ಆವೃತ್ತಿಗಳ ಪೈಕಿ 15ರಲ್ಲಿ ಭಾಗವಹಿಸಿದೆ. 2013ರಲ್ಲಿ ವಿಶ್ವಕಪ್‌ನಿಂದ ವಂಚಿತವಾಗಿತ್ತು. 1999ರಲ್ಲಿ ನ್ಯೂಝಿಲೆಂಡ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ನಾಲ್ಕನೆ ಸ್ಥಾನ ಪಡೆದಿರುವುದು ಅಮೆರಿಕದ ಮಹತ್ವದ ಸಾಧನೆಯಾಗಿದೆ.
ಅಮೆರಿಕ ನಾಲ್ಕು ಬಾರಿ ಕ್ವಾರ್ಟರ್‌ಫೈನಲ್‌ಗೆ ತಲುಪಿದೆ. 2005ರಲ್ಲಿ ಪೆರುವಿನಲ್ಲಿ ಕೊನೆಯ ಬಾರಿ ಈ ಸಾಧನೆ ಮಾಡಿತ್ತು. 2015ರಲ್ಲಿ ಚಿಲಿಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಆಡಿರುವ ಎಲ್ಲ ಗ್ರೂಪ್ ಪಂದ್ಯಗಳನ್ನು ಸೋತಿತ್ತು. 2001ರ ಬಳಿಕ ಇಂತಹ ಕಳಪೆ ಪ್ರದರ್ಶನ ನೀಡಿತ್ತು.







