ಅ. 6ರಂದು ಗೌರಿ ಲಂಕೇಶ್ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ: ಡಾ. ಎನ್. ಮೂರ್ತಿ

ದಾವಣಗೆರೆ, ಅ.2: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ, ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಅ. 6ರಂದು ರಾಜ್ಯಾದ್ಯಂತ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಾ. ಎನ್. ಮೂರ್ತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಂದು ಬೆಳಗ್ಗೆ 11ಕ್ಕೆ ಧರಣಿ ನಡೆಸಲಾಗುವುದು. ಇದಕ್ಕೂ ಮೊದಲು ದೆಲ್ಲಿಯಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಪ್ರಗತಿಪರ ವಿಚಾರವಾದಿಗಳ ಸರಣಿ ಹತ್ಯೆ ಮಾಡಿದವರ ಹಿಂದಿರುವ ಜಾಲ ಪತ್ತೆ ಹಚ್ಚಿ ಶಿಕ್ಷೆ ವಿಧಿಸಬೇಕು. ಗೌರಿ ಲಂಕೇಶ್ ಹತ್ಯೆಗೈದು ತಿಂಗಳಾಗುತ್ತ ಬಂದಿದ್ದದರೂ ಹಂತಕರ ಬಂಧನವಾಗಿಲ್ಲ. ಸರ್ಕಾರ ವಿಶೇಷ ದಳ ರಚಿಸಿ ತರಬೇತಿ ನೀಡಬೇಕು. ದುಷ್ಟ ಶಕ್ತಿಗಳನ್ನು ಶಿಕ್ಷಿಸಲು ಸೂಕ್ತ ಕಾನೂನು ತಿದ್ದುಪಡಿ ಮಾಡುವಂತೆ ಎಂದು ಆಗ್ರಹಿಸಿದರು.
ಮೀಸಲಾತಿ ವರ್ಗೀಕರಣ ಅನುಷ್ಠಾನಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ಜಾರಿಗೆ ತರುವಲ್ಲಿ ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸರ್ಕಾರದ ಅನೇಕ ಸಚಿವರ ವಿರೋಧವಿದೆ. ದಲಿತ ಏಳ್ಗೆಗೆ ಸಹಕರಿಸದ ಪರಮೇಶ್ವರ ಮುಖ್ಯಮಂತ್ರಿ ಆಗಿಲ್ಲ ಎಂದು ಆರೋಪಿಸಿದ ಅವರು, ಮೀಸಲು ಜಾರಿ ಸಂಬಂಧ ಮುಖ್ಯಮಂತ್ರಿಗೆ 2,3 ಬಾರಿ ಮನವಿ ಸಲ್ಲಿಸಲಾಗಿದೆ. ಉತ್ತರವೇ ಬಂದಿಲ್ಲ. ಈ ಕುರಿತು ಅ. 7, 8ರಂದು ರಾಜ್ಯಮಟ್ಟದ ಸಭೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಲಿಂಗಯ್ಯ, ಶಂಭುಲಿಂಗಪ್ಪ, ಜಿ.ಜಿ. ಆಸೀಫ್ ಆಲಿ, ಪ್ರಕಾಶ್, ಎನ್. ಮಲ್ಲೇಶ್, ಶ್ರೀನಿವಾಸ್, ಯಲ್ಲಪ್ಪ ಮತ್ತಿತರರಿದ್ದರು.







