ಸರಳತೆ ಗಾಂಧೀಜಿಯವರ ದೊಡ್ಡ ಮೌಲ್ಯ: ವೈ.ಎಸ್.ವಿ. ದತ್ತ

ಕಡೂರು, ಅ.2: ಎಲ್ಲರಿಗೂ ಗಾಂಧೀಜಿಯವರ ಆದರ್ಶಗಳು ಪ್ರೇರಣೆಯಾಗಬೇಕಿದೆ. ಸರಳತೆ ಗಾಂಧೀಜಿಯವರ ದೊಡ್ಡ ಮೌಲ್ಯ. ಲಾಲ್‍ಬಹಾದ್ದೂರ್ ಶಾಸ್ತ್ರಿಗಳ ಆದರ್ಶ, ಪ್ರಾಮಾಣಿಕತೆ ಈಗಿನ ರಾಜಕಾರಣಿಗಳಿಗೆ ಆದರ್ಶವಾಗಬೇಕಿದೆ ಎಂದು ಕ್ಷೇತ್ರದ ಶಾಸಕರಾದ ವೈ.ಎಸ್.ವಿ. ದತ್ತರವರು ತಿಳಿಸಿದ್ದಾರೆ.
ಸೋಮವಾರ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸರಳವಾಗಿ ಏರ್ಪಡಿಸಲಾಗಿದ್ದ ಗಾಂಧಿ ಜಯಂತಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಅರ್ಥಪೂರ್ಣವಾದ ಜಯಂತಿ ಆಚರಣೆಗಳನ್ನು ವಿಭಿನ್ನ ರೀತಿಯಲ್ಲಿ ಕಳೆದ 4 ವರ್ಷಗಳಿಂದ ಆಚರಿಸಿಕೊಂಡು ಬರಲಾಗಿದೆ. ಪರಿಕಲ್ಪನೆಗಳು ಹುಟ್ಟುತ್ತವೆ, ಬೆಳಕು ಕಿಡಿಯಿಂದ ಹುಟ್ಟಲಿದೆ. ಗಾಂಧೀಜಿಯವರ ತತ್ವಗಳು ಆಂದೋಲನವಾಗಬೇಕಿದೆ. ಗಾಂಧಿವಾದ, ಅಂಬೇಡ್ಕರ್ ವಾದ ಒಂದೇ ಆಗಿದೆ. ಜನಹಿತ ದೃಷ್ಟಿಯಿಂದ ಅಂಬೇಡ್ಕರ್‍ರವರು ಸಂವಿಧಾನ ರಚಿಸಿದರು. ಗಾಂಧಿಯಾಗಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಜಿಪಂ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಗಾಂಧೀಜಿಯವರ ವಿಚಾರಧಾರೆಗಳು, ಅವರ ತತ್ವ-ಆದರ್ಶಗಳು ಸಾವಿರಾರು ವರ್ಷಗಳು ಇರಲಿವೆ. ಮಾನವತಾವಾದಿಯಾಗಿ ವಿಶೇಷವಾದ ಶಕ್ತಿ ಹೊಂದಿದ್ದರು. ಅಹಿಂಸೆ ಅವರ ಪ್ರಬಲವಾದ ಅಸ್ತ್ರವಾಗಿತ್ತು. ಇತ್ತೀಚಿನ ದಿನಗಳಲ್ಲಿ ಗಾಂಧಿ ತತ್ವಗಳು ಸವಕಲು ನಾಣ್ಯಗಳಂತಾಗಿವೆ. ಮನುಕುಲಕ್ಕೆ ದೊಡ್ಡ ಕೊಡುಗೆ ಗಾಂಧಿ ತತ್ವವಾಗಿದೆ ಎಂದು ನುಡಿದರು.
ಇದಕ್ಕೂ ಮುನ್ನಾ ಮುಸ್ಲಿಂ ಗುರು ಮೊಹಮ್ಮದ್ ಸಾದೀಕ್, ಕ್ರೈಸ್ತ ಧರ್ಮಗುರು ರಿಷಬ್ ಡಾ. ಬಾಲರಾಜ್, ಹಿಂದೂ ಧರ್ಮದ ಶ್ರೀಧರ ಭಟ್ ಅವರು ತಮ್ಮ ತಮ್ಮ ಗ್ರಂಥಗಳನ್ನು ಪಠಿಸಿದರು.
ಸಮಾರಂಭದಲ್ಲಿ ತಹಶೀಲ್ದಾರ್ ಭಾಗ್ಯ, ಪುರಸಭಾ ಸದಸ್ಯ ಬಷೀರ್‍ಸಾಬ್, ಬಿ.ಟಿ. ಗಂಗಾಧರನಾಯ್ಕ, ಶೂದ್ರ ಶ್ರೀನಿವಾಸ್ ಮಾತನಾಡಿದರು. ಕೆ.ಎಂ.ಮಹೇಶ್ವರಪ್ಪ, ಸೀಗೆಹಡ್ಲು ಹರೀಶ್, ಜಿ.ಸೂರಿ ಉಪಸ್ಥಿತರಿದ್ದರು.







