ಡೇರಾ ಅನುಯಾಯಿಗಳಿಂದ ಇಸ್ಲಾಂಗೆ ಮತಾಂತರವಾಗುವ ಬೆದರಿಕೆ

ಹೊಸದಿಲ್ಲಿ, ಅ.3: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಗುರ್ಮೀತ್ ಸಿಂಗ್ ನ ಡೇರಾ ಅನುಯಾಯಿಗಳು ಇಸ್ಲಾಂಗೆ ಮತಾಂತರವಾಗುವ ಬೆದರಿಕೆಯೊಡ್ಡಿದ್ದಾರೆ.
ಹಿಂದೂವಾಗಿರುವ ಕಾರಣ ಗುರ್ಮೀತ್ ನನ್ನು ಜೈಲಿಗಟ್ಟಲಾಗಿದೆ. ಹಿಂದೂ ಸಂಸ್ಥೆಗಳನ್ನು ಗುರಿಯಾಗಿಸುವುದು ಸುಲಭವಾಗಿದೆ ಎಂದು ಡೇರಾ ಅನುಯಾಯಿಗಳು ಆರೋಪಿಸಿದ್ದಾರೆ.
“ನೀವು ಹಿಂದೂಸ್ತಾನವನ್ನು ಪ್ರೀತಿಸುತ್ತೀರಾದರೆ, ಹಿಂದೂವಾಗಿರುವುದೇ ನಮ್ಮ ದೇಶದಲ್ಲಿ ಅಪರಾಧ ಎಂದು ಅರಿತಾಗ ನೀವು ಕಣ್ಣೀರು ಹಾಕುತ್ತೀರಿ. ನಿಮ್ಮ ನಂಬಿಕೆಯ ಮೇಲೆ ಆಕ್ರಮಣ ನಡೆದಾಗ ಮತಾಂತರ ಯಾಕಾಗಬಾರದು?” ಎಂದು ವಿಡಿಯೋವೊಂದನ್ನು ಬಿಡುಗಡೆಗೊಳಿಸಿರುವ ಡೇರಾದ ವಕ್ತಾರ ಸಂದೀಪ್ ಮಿಶ್ರಾ ಹೇಳಿದ್ದಾನೆ.
ಈ ವಿಡಿಯೋದಲ್ಲಿ ಮುಖವನ್ನು ಮುಚ್ಚಿಕೊಂಡಿರುವ ಡೇರಾದ ಇತರ ಅನುಯಾಯಿಗಳೂ ಸಹ ಇದ್ದಾರೆ. "ಇಸ್ಲಾಂಗೆ ಮತಾಂತರವಾಗುವುದು ತಮಗೆ ಸಹಕಾರಿಯಾಗಬಹುದು. ಮುಸ್ಲಿಮರು ಕಲ್ಲೆಸೆದಾಗಲೂ ಅವರನ್ನು ಯಾರೂ ಮುಟ್ಟುವುದಿಲ್ಲ" ಎಂದು ಇವರು ವಿಡಿಯೋದಲ್ಲಿ ಆರೋಪಿಸಿದ್ದಾರೆ.
“ನಾವು ಬರಿಗೈಯಲ್ಲಿದ್ದಾಗ ಬುಲೆಟ್ ಗಳನ್ನು ಎದುರಿಸಿದ್ದೇವೆ. ಮುಸ್ಲಿಮರೊಂದಿಗೆ ನಮ್ಮ ನಾಯಕ ಸಂಪರ್ಕ ಹೊಂದಿದ್ದರು. ಒಂದು ಲಕ್ಷ ಅನುಯಾಯಿಗಳು ಒಪ್ಪಿಗೆ ನೀಡಿದಾಗ ನಾವು ಮತಾಂತರವಾಗುತ್ತೇವೆ” ಎಂದು ಡೇರಾದ ಅನುಯಾಯಿಯೊಬ್ಬ ಹೇಳಿದ್ದಾನೆ.
ರಾಜಕಾರಣಿಗಳಾದ ಅಸಾದುದ್ದೀನ್ ಒವೈಸಿ ಹಾಗು ಶಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿಯೊಂದಿಗೆ ಡೇರಾ ಅನುಯಾಯಿಗಳು ಸಂಪರ್ಕದಲ್ಲಿದ್ದಾರೆ ಎಂದು ಮಿಶ್ರಾ ಹೇಳಿದ್ದಾನೆ.
ಆದರೆ ಈ ಹೊಸ ವಿವಾದದ ಹಿಂದೆ ಗುರ್ಮೀತ್ ಸಿಂಗ್ ಇದ್ದಾನೆ ಎನ್ನಲಾಗುತ್ತಿದೆ. ತಾನು ಸಂಕಷ್ಟದಲ್ಲಿದ್ದಾಗ ಧರ್ಮದ ಕಾರ್ಡ್ ಮೂಲಕ ಆಟವಾಡಲು ಆತನಿಗೆ ತಿಳಿದಿದೆ ಎಂದು ಮೂಲಗಳು ಮಾಹಿತಿ ನೀಡಿರುವುದಾಗಿ 'ಡೈಲಿ ಮೇಲ್' ವರದಿ ಮಾಡಿದೆ.
ಜೈಲಿನೊಳಗಿದ್ದರೂ ಗುರ್ಮೀತ್ ತನ್ನ ಅನುಯಾಯಿಗಳಿಗೆ ಸೂಚನೆ ನೀಡುತ್ತಿದ್ದಾನೆ. ಬಿಜೆಪಿ ನೇತೃತ್ವದ ರಾಜ್ಯ ಸರಕಾರವಲ್ಲದೆ, ಪೊಲೀಸರು ಹಾಗು ಅಧಿಕಾರಿಗಳು ಗುರ್ಮೀತ್ ನ ಸ್ನೇಹಿತರಾಗಿದ್ದಾರೆ. ಅವರೇ ಜೈಲಿನಲ್ಲಿದ್ದುಕೊಂಡೇ ಗುರ್ಮೀತ್ ಡೇರಾದ ವ್ಯವಹಾರಗಳನ್ನು ನಡೆಸಲು ಸಹಕರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ.
"ತಾನು ಸಂಕಷ್ಟದಲ್ಲಿದ್ದಾಗ, ಎಲ್ಲವೂ ತನ್ನ ವಿರುದ್ಧವಿದ್ದಾಗ ಧರ್ಮದ ವಿಚಾರವನ್ನೆತ್ತಿ ಗಮನವನ್ನು ಬೇರೆಡೆಗೆ ತಿರುಗಿಸಲು ಆತನಿಗೆ ಗೊತ್ತಿದೆ" ಎಂದು ಡೇರಾದ ಮಾಜಿ ಅನುಯಾಯಿ ಗುರುದಾಸ್ ಸಿಂಗ್ ಹಾಗು ಗುರ್ಮೀತ್ ನ ಸಂಬಂಧಿ ಭೂಪಿಂದರ್ ಸಿಂಗ್ ಹೇಳಿದ್ದಾರೆ.
“ಆತನೊಬ್ಬ ಗುಳ್ಳೆನರಿ. ಧರ್ಮದ ಶಕ್ತಿ ಆತನಿಗೆ ತಿಳಿದಿದೆ. ಮುಸ್ಲಿಮರಲ್ಲೂ ಆತನ ಅನುಯಾಯಿಗಳಿದ್ದಾರೆಂದು ನಿರೂಪಿಸಲು ಆತ ತನ್ನ ಅನುಯಾಯಿಗಳ ಹೆಸರನ್ನು ಬದಲಾಯಿಸುತ್ತಿದ್ದಾನಷ್ಟೆ" ಎಂದು ಗುರುದಾಸ್ ಸಿಂಗ್ ಹೇಳಿದ್ದಾರೆ.







