ಸಾರಿಗೆ ಬಸ್ ಢಿಕ್ಕಿ: ದಂಪತಿ ಮೃತ್ಯು
ಬೆಂಗಳೂರು, ಅ.3: ತಮಿಳುನಾಡಿನ ಸಾರಿಗೆ ಬಸ್ಸೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿರುವ ಘಟನೆ ಇಲ್ಲಿನ ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಮೈಸೂರು ರಸ್ತೆ ಗೋರಿಪಾಳ್ಯ ನಿವಾಸಿಗಳಾದ ಅಂಥೋಣಿ ಜೋಸೆಫ್ (55), ಮತ್ತು ಸಗಾಯ್ ಮೇರಿ(53) ಮೃತಪಟ್ಟ ದಂಪತಿ ಎಂದು ಪೊಲೀಸರು ಗುರುತಿಸಿದ್ದಾರೆ.
ಘಟನೆ ವಿವರ: 6 ವರ್ಷದ ಮೊಮ್ಮಗಳಾದ ಅಚುರಾ ಮೇರಿಗೆ ಅನಾರೋಗ್ಯ ಕಾರಣ ಸ್ಕೂಟರ್‌ನಲ್ಲಿ ಮಾರ್ಥಾಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ಮಂಗಳವಾರ ಮುಂಜಾನೆ 1:45ರಲ್ಲಿ ಜೆ.ಜೆ.ನಗರಕ್ಕೆ ಹಿಂದಿರುಗುತ್ತಿದ್ದರು. ಮಾರ್ಕೆಟ್‌ನ ಮೇಲ್ಸೇತುವೆ ಮೇಲೆ ಬರುತ್ತಿದ್ದಾಗ ನಳಂದ ಚಿತ್ರಮಂದಿರ ಸಮೀಪ ಹಿಂದಿನಿಂದ ಅತಿ ವೇಗವಾಗಿ ಬಂದ ತಮಿಳುನಾಡು ಸಾರಿಗೆ ಸಂಸ್ಥೆ ಬಸ್ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಮೊಮ್ಮಗಳು ಒಂದು ಬದಿಗೆ ಬಿದ್ದರೆ, ದಂಪತಿ ಬಸ್‌ನ ಚಕ್ರಕ್ಕೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನೆಯಲ್ಲಿ ಅಚುರಾಗೆ ಸಣ್ಣಪುಟ್ಟ ಗಾಯವಾಗಿದೆ. ಅಪಘಾತ ಸಂಭಸುತ್ತಿದ್ದಂತೆ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ. ಸಂಚಾರಿ ಠಾಣೆ ಪೊಲೀಸರು ಬಸ್ ವಶಕ್ಕೆ ಪಡೆದು ಮೃತರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





