ಕೇರಳದ ಹಿಂಸೆಯ ಕೆಸರಿನಲ್ಲಿ ತಾವರೆ ಅರಳುವುದನ್ನು ತಡೆಯಲಾಗದು: ಅಮಿತ್ ಶಾ
.jpg)
ಕಾಸರಗೋಡು, ಅ.3: ಕೇರಳದಲ್ಲಿ ಹಿಂಸೆಯ ಕೆಸರಾಟ ನಡೆಸಿದರೂ ಅದೇ ಕೆಸರಿನಲ್ಲಿ ತಾವರೆ ಅರಳುವುದನ್ನು ಯಾರಿಗೂ ತಡೆಯಲಾಗದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ.
ಮಂಗಳವಾರ ಪಯ್ಯನ್ನೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ವಿಜಯನ್ ನೇತೃತ್ವದಲ್ಲಿ ನಡೆಯುತ್ತಿರುವ 'ಜನರಕ್ಷಾ ಯಾತ್ರೆ'ಗೆ ಚಾಲನೆ ನೀಡಿ ಮಾತನಾಡಿದ ಅವರು, ಸಿಪಿಎಂ ವಿರುದ್ಧ ದೇಶವ್ಯಾಪಿ ಹೋರಾಟ ನಡೆಸಲಾಗುವುದು. ಸಿಪಿಎಂನ ಆಡಳಿತದಲ್ಲಿ ಕೊಲೆಗಳ ಸರಣಿ ನಡೆಯುತ್ತಿದೆ. 48 ಅಮಾಯಕ ಆರೆಸ್ಸೆಸ್ - ಬಿಜೆಪಿ ಕಾರ್ಯಕರ್ತರ ಕೊಲೆ ಮಾಡಲಾಗಿದೆ. ಸಿಪಿಎಂ ರಾಜಕೀಯ ಸರ್ಕಸ್ ಮಾಡುತ್ತಿದೆ. ಅ.4ರಿಂದ 17ರ ತನಕ ದಿಲ್ಲಿಯ ಎಕೆಜಿ ಭವನಕ್ಕೆ ಜಾಥಾ ನಡೆಸಲಾಗುವುದು. ಎಲ್ಲಾ ರಾಜ್ಯಗಳಲ್ಲೂ ಯುವಮೋರ್ಚಾ ನೇತೃತ್ವದಲ್ಲಿ ನಾಳೆಯಿಂದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಸಿಪಿಎಂ ನೇತೃತ್ವದ ಸರಕಾರ ಅಧಿಕಾರಕ್ಕೇರಿದ ಬಳಿಕ 13 ಬಿಜೆಪಿ ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ. ಸಿಪಿಎಂನ ಹಿಂಸೆಯ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರ ಕೊಲೆಯನ್ನು ಸಿಪಿಎಂ ಕೊನೆಗೊಳಿಸಬೇಕು. ಈ ಬಗ್ಗೆ ನಾಯಕತ್ವ ಮುಂದೆ ಬರಬೇಕು ಎಂದವರು ಹೇಳಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತಾನಂ, ಬಿಜೆಪಿ ಮುಖಂಡರಾದ ವಿ.ಮುರಳೀಧರನ್, ಸಿ.ಟಿ ರವಿ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯಸಭಾ ಸದಸ್ಯ ಸುರೇಶ್ ಗೋಪಿ, ರಿಚರ್ಡ್ ಹೇನ್ರಿ, ಶಾಸಕ ಒ. ರಾಜಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.
ಸೋಮವಾರ ತಡರಾತ್ರಿ ಮಂಗಳೂರಿಂದ ಆಗಮಿಸಿದ ಅಮಿತ್ ಷಾ ಬೇಕಲದಲ್ಲಿ ತಂಗಿದ್ದು, ಬೆಳಗ್ಗೆ ತಳಿಪರಂಬ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಕುಮ್ಮನ ರಾಜಶೇಖರನ್, ಕೆ. ಸುರೇಂದ್ರನ್ ಮೊದಲಾದ ಮುಖಂಡರು ಜೊತೆಗಿದ್ದರು. ಬಳಿಕ ನಡೆದ ಸಮಾರಂಭದಲ್ಲಿ ಕುಮ್ಮನಂ ರಾಜಶೇಖರನ್ ರಿಗೆ ಪಕ್ಷದ ಪತಾಕೆ ಹಸ್ತಾಂತರಿಸುವ ಮೂಲಕ ಅಮಿತ್ ಷಾ ಜನರಕ್ಷಾ ಯಾತ್ರೆಗೆ ಚಾಲನೆ ನೀಡಿದರು.
ಮೊದಲ ದಿನ ಪಯ್ಯನ್ನೂರಿನಿಂದ ಪಿಲಾತ್ತರ ತನಕ ನಡೆದ ಪಾದಯಾತ್ರೆಯಲ್ಲಿ ಅಮಿತ್ ಷಾ ಪಾಲ್ಗೊಂಡರು. ರಾಜ್ಯದ 11 ಜಿಲ್ಲೆಗಳ ಮೂಲಕ ಅ.17ರ ತನಕ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆ ಅ.17ರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದೆ.







