ಭೂ ಕಂದಾಯ ಮಸೂದೆಗೆ ರಾಷ್ಟ್ರಪತಿ ಅಂಕಿತಕ್ಕೆ ಆಗ್ರಹ
ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ

ಬೆಂಗಳೂರು, ಅ. 3: ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಹಾಡಿ ನಿವಾಸಿಗಳಿಗೆ ಭೂಮಿ ಹಕ್ಕು ಕಲ್ಪಿಸುವ ‘ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆಗೆ ರಾಷ್ಟ್ರಪತಿಗಳು ಕೂಡಲೇ ಅಂಕಿತ ಹಾಕಬೇಕೆಂದು ಆಗ್ರಹಿಸಿ ‘ಹಮ್ ಗೋರ್ ಕಟಮಾಳೊ’ ವತಿಯಿಂದ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಮಂಗಳವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಸಹಿ ಹಾಕುವ ಮೂಲಕ ಚಳವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಲಂಬಾಣಿ ತಾಂಡಗಳು, ಗೊಲ್ಲರಹಟ್ಟಿ, ಆದಿವಾಸಿಗಳ ಹಾಡಿಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ಸಿಗಬೇಕು ಎಂದರು.
ಶತಮಾನಗಳಿಂದಲೂ ನಾಗರಿಕ ಸಮಾಜದಿಂದ ದೂರ ಇರುವ ಜನರಿಗೂ ರಸ್ತೆ, ವಿದ್ಯುತ್, ಕುಡಿಯುವ ನೀರು ಆಸ್ಪತ್ರೆ, ಶಾಲೆ, ಅಂಗನವಾಡಿ ಸೇರಿದಂತೆ ಅಗತ್ಯ ನಾಗರಿಕ ಸೌಲಭ್ಯಗಳು ಸಿಗಬೇಕು. ಹೀಗಾಗಿ ರಾಷ್ಟ್ರಪತಿಗಳು ಕೂಡಲೇ ಭೂ ಕಂದಾಯ ಮಸೂದೆಗೆ ಅಂಕಿತ ಹಾಕಬೇಕೆಂದು ಮನವಿ ಮಾಡಿದರು.
ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳು ಕಳೆದರೂ ಲಂಬಾಣಿ ತಾಂಡ, ಗೊಲ್ಲರಹಟ್ಟಿ ಸೇರಿ ಇನ್ನಿತರ ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿಲ್ಲ. ಹೀಗಾಗಿ ಅರಣ್ಯ ಮತ್ತು ಖಾಸಗಿ ಭೂಮಿಯಲ್ಲಿ ವಾಸ ಮಾಡುವಂತಹ ದುಸ್ಥಿತಿ ಇದೆ. ಆದುದರಿಂದ ಅವರಿಗೆ ವಾಸಿಸುವ ಹಕ್ಕು ಮೊದಲು ಸಿಗಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರದೀಪ್ ರಮಾವತ್ ಮಾತನಾಡಿ, ಲಂಬಾಣಿ ತಾಂಡಗಳು ಕಂದಾಯ ಗ್ರಾಮಗಳ ಮಾನ್ಯತೆ ಇಲ್ಲದ ಕಾರಣಕ್ಕೆ ನಾಗರಿಕ ಸೌಲಭ್ಯಗಳು ಸಿಗುತ್ತಿಲ್ಲ. ಶಾಶ್ವತ ನೆಲೆ ಇಲ್ಲದ ಕಾರಣ ವಲಸೆ, ಅಲೆಮಾರಿಗಳಂತೆ ಈ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.
ಶೋಷಣೆ ಸುಳಿಗೆ ಸಿಲುಕಿರುವ ಈ ಸಮುದಾಯದ ಮಕ್ಕಳು ಮತ್ತು ಮಹಿಳೆಯರ ಮಾರಾಟ ಬಡತನದ ಭೀಕರತೆಗೆ ಸಾಕ್ಷಿಯಾಗಿದೆ. ಮನೆಯ ಹಕ್ಕುಗಳು ಇಲ್ಲದೆ, ಅತ್ತ ಉಳುಮೆಗೆ ಭೂಮಿಯೂ ಇಲ್ಲದ ಲಂಬಾಣಿಗರು ಪರಕೀಯರಂತೆ ಇರುವುದು ದೇಶಕ್ಕೆ ಅವಮಾನ. ಆದುದರಿಂದ ಇವರಿಗೆ ವಾಸಿಸುವ ಹಕ್ಕನ್ನು ನೀಡಬೇಕೆಂದು ಕೋರಿದರು.
ಸಹಿ ಸಂಗ್ರಹ ಆಂದೋಲನದ ನೇತೃತ್ವ ವಹಿಸಿದ್ದ ಹಮ್ ಗೋರ್ ಕಟಮಾಳೊ ಮುಖಂಡ ವಿಜಯ್ ಜಾಧವ್ ಮಾತನಾಡಿ, ಕರ್ನಾಟಕ ಭೂ ಕಂದಾಯ ಮಸೂದೆಗೆ ಅಂಕಿತ ಹಾಕಲು ಆಗ್ರಹಿಸಿ ಒಂದು ವಾರಗಳ ಕಾಲ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಸಹಿ ಸಂಗ್ರಹ ಚಳವಳಿ ನಡೆಸಲಾಗುವುದು. ಅ.10ರಂದು ಆಯಾ ಜಿಲ್ಲಾಧಿಕಾರಿ, ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರಂಗ ಕಲಾವಿದ ಡಾ.ಗೋವಿಂದಸ್ವಾಮಿ, ಚಿಂತಕ ಡಾ.ಚಂದ್ರಶೇಖರ್, ವಕೀಲ ಅನಂತ ನಾಯ್ಕಾ, ಮುಖಂಡರಾದ ನಾಗರಾಜ್, ಚೆನ್ನು ಪವಾರ್, ಡಾಕ್ಯನಾಯ್ಕಾ ಶ್ರೀಕಾಂತ್ ಚೌವ್ಹಾಣ್, ಲಕ್ಷ್ಮಣ ಬಳಬಟ್ಟಿ, ಸ್ವಾಮಿ ರಾಠೋಡ್, ವೀರುನಾಯ್ಕಾ, ಪ್ರತಿಮಾ ನಾಯ್ಕಾ ಸೇರಿದಂತೆ ಇನ್ನಿತರರು ಹಾಜರಿದ್ದರು.







