ಅಮೆರಿಕದ ಮುಕ್ತ ಬಂದೂಕು ಚರ್ಚೆ ಮತ್ತೆ ಮುನ್ನೆಲೆಗೆ
ಲಾಸ್ ವೇಗಸ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 59ಕ್ಕೆ

ವಾಶಿಂಗ್ಟನ್, ಅ. 3: ಲಾಸ್ ವೇಗಸ್‌ನಲ್ಲಿ ನಡೆದಿರುವ ಭೀಕರ ಹತ್ಯಾಕಾಂಡವನ್ನು ಅರಗಿಸಿಕೊಳ್ಳಲು ಅಮೆರಿಕ ಪರದಾಡುತ್ತಿರುವಂತೆಯೇ, ಆ ದೇಶದ ಮುಕ್ತ ಬಂದೂಕು ಪರವಾನಿಗೆ ವ್ಯವಸ್ಥೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಲಾಸ್ ವೇಗಸ್ ಬಂದೂಕುಧಾರಿ ಒಟ್ಟು 42 ಬಂದೂಕುಗಳನ್ನು ಹೊಂದಿದ್ದನು. ಆ ಪೈಕಿ 23 ಆತನ ಹೊಟೇಲ್ ಕೋಣೆಯಲ್ಲಿತ್ತು ಹಾಗೂ ಅಲ್ಲಿಂದಲೇ ಗುಂಡು ಹಾರಿಸಿ 59 ಮಂದಿಯನ್ನು ಕೊಂದಿದ್ದಾನೆ. 527 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದಾರೆ. 19 ಬಂದೂಕುಗಳು ಆತನ ಮನೆಯಲ್ಲಿತ್ತು.
64 ವರ್ಷದ ಪಾತಕಿ ಸ್ಟೀಫನ್ ಕ್ರೇಗ್ ಪ್ಯಾಡಕ್‌ನ ಹೊಟೇಲ್ ಕೋಣೆಗೆ ಪೊಲೀಸರು ನುಗ್ಗಿದಾಗ ಆತ ಶವವಾಗಿ ಪತ್ತೆಯಾಗಿದ್ದಾನೆ. ಆತ ತನಗೆ ತಾನೇ ಗುಂಡು ಹಾರಿಸಿಕೊಂಡು ಸತ್ತಿರಬೇಕೆಂದು ಶಂಕಿಸಲಾಗಿದೆ.
ಆತನ ಕೋಣೆ, ಕಾರು ಮತ್ತು ಮನೆಯನ್ನು ಶೋಧಿಸಿದಾಗ ಅಲ್ಲಿ ಒಂದು ಸಣ್ಣ ಶಸ್ತ್ರಾಗಾರವೇ ಇತ್ತು ಎನ್ನಲಾಗಿದೆ.
ಬಂದೂಕು ಕಾನೂನಿನಲ್ಲಿ ಮಾರ್ಪಾಡಿಗೆ ಭಾರತ-ಅಮೆರಿಕನ್ ಸಂಸದರ ಕರೆ
ಲಾಸ್ ವೇಗಸ್ ಹತ್ಯಾಕಾಂಡವನ್ನು ಖಂಡಿಸಿರುವ ಭಾರತೀಯ ಅಮೆರಿಕನ್ ಸಂಸದರು, ಅಮೆರಿಕದ ಬಂದೂಕು ನಿಯಂತ್ರಣ ಕಾನೂನಿನಲ್ಲಿ ಮಾರ್ಪಾಡಿಗಾಗಿ ಕರೆ ನೀಡಿದ್ದಾರೆ.
ಲಾಸ್ ವೇಗಸ್‌ನಲ್ಲಿ ರವಿವಾರ ರಾತ್ರಿ ಸಂಗೀತ ಕಾರ್ಯಕ್ರಮವೊಂದರ ವೇಳೆ ವ್ಯಕ್ತಿಯೊಬ್ಬ ನಡೆಸಿದ ಗುಂಡುಹಾರಾಟದಲ್ಲಿ ಸುಮಾರು 60 ಮಂದಿ ಮೃತಪಟ್ಟಿದ್ದು, ಇದು ಆಧುನಿಕ ಅಮೆರಿಕ ಇತಿಹಾಸದ ಅತ್ಯಂತ ಭೀಕರ ಹತ್ಯಾಕಾಂಡವಾಗಿದೆ.
ಬಂದೂಕಿನಿಂದ ನಡೆಯುವ ಹಿಂಸೆಯು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿದ್ದು, ಸಾವಿರಾರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದೆ ಹಾಗೂ ಈ ಪಿಡುಗನ್ನು ನಿವಾರಿಸಲು ಸಂಸತ್ತು ಕಾಂಗ್ರೆಸ್ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯೆ ಪ್ರಮೀಳಾ ಜಯಪಾಲ್ ಸೋಮವಾರ ಸದನದಲ್ಲಿ ಹೇಳಿದರು.
ಇತರ ಸಂಸದರಾದ ರಾಜಾ ಕೃಷ್ಣಮೂರ್ತಿ ಮತ್ತು ರೋ ಖನ್ನಾ ಇದಕ್ಕೆ ದನಿಗೂಡಿಸಿದ್ದಾರೆ.
ಈ ವರ್ಷ 12,000 ಅಮೆರಿಕನ್ನರು ಬಂದೂಕಿಗೆ ಬಲಿ
2017ರಲ್ಲಿ ಈವರೆಗೆ ನಡೆದ 273 ಗುಂಡುಹಾರಾಟ ಪ್ರಕರಣಗಳಲ್ಲಿ ಸುಮಾರು 12,000 ಅಮೆರಿಕನ್ನರು ಮೃತಪಟ್ಟಿದ್ದಾರೆ ಎಂದು ‘ಗನ್ ವಾಯಲೆನ್ಸ್ ಆರ್ಕೈವ್’ ಎಂಬ ಸಂಘಟನೆ ತಿಳಿಸಿದೆ.
ಅಂದರೆ, ಸರಾಸರಿ ದಿನಕ್ಕೆ ಒಂದರಂತೆ ಘಟನೆ ನಡೆದಿದೆ ಎಂದು ಅಮೆರಿಕದಲ್ಲಿ ಬಂದೂಕು ಸಂಬಂಧಿ ಹಿಂಸೆಯ ಮೇಲೆ ನಿಗಾ ಇಟ್ಟಿರುವ ಈ ಸಂಸ್ಥೆ ಹೇಳಿದೆ.
ಅಮೆರಿಕದಲ್ಲಿ ಪ್ರತಿ ದಿನ ಸರಾಸರಿ 90ಕ್ಕೂ ಅಧಿಕ ಜನರು ಬಂದೂಕು ಸಂಬಂಧಿ ಹಿಂಸೆಗೆ ಬಲಿಯಾಗುತ್ತಿದ್ದಾರೆ.
ಪಾತಕಿಯ ಉದ್ದೇಶ ಸ್ಪಷ್ಟವಿಲ್ಲ
ಹೊರಾಂಗಣದಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೇರಿದ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ 24 ಗಂಟೆಗಳ ಬಳಿಕವೂ, ಪ್ಯಾಡಕ್‌ನ ಉದ್ದೇಶವೇನೆನ್ನುವುದು ಸ್ಪಷ್ಟವಾಗಿಲ್ಲ.
ಮೂರು ದಿನಗಳ ಸಂಗೀತ ಉತ್ಸವ ಮುಕ್ತಾಯ ಹಂತದಲ್ಲಿತ್ತು. ಗಾಯಕ ಜಾಸನ್ ಆ್ಯಲ್ಡಿಯನ್ ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದರು. ಗುಂಡು ಹಾರಾಟ ಆರಂಭವಾಗುತ್ತಿದ್ದಂತೆಯೇ ಜಾಸನ್ ವೇದಿಕೆಯಿಂದ ಒಳಗೆ ಓಡಿದರು.
‘‘ಮಾನಸಿಕ ವಿಕಲ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಹೇಳಲು ನನಗೆ ಸಾಧ್ಯವಿಲ್ಲ’’ ಎಂದು ಶರೀಫ್ ಜೋಸೆಫ್ ಲೊಂಬಾರ್ಡೊ ಸುದ್ದಿಗಾರರಿಗೆ ಹೇಳಿದರು.
ಅದೇ ವೇಳೆ, ಜೂಜಾಡಲು ಪದೇ ಪದೇ ಲಾಸ್ ವೇಗಸ್‌ಗೆ ಹೋಗುತ್ತಿದ್ದ ಬಂದೂಕುಧಾರಿಯನ್ನು ‘ದ್ವೇಷದಿಂದ ತುಂಬಿ ಹೋಗಿರುವ ಹುಚ್ಚ’ ಎಂಬುದಾಗಿ ಮೇಯರ್ ಕ್ಯಾರಲಿನ್ ಗುಡ್‌ಮನ್ ಬಣ್ಣಿಸಿದರು.
ಬಂದೂಕು ನಿಯಂತ್ರಣ ಚರ್ಚೆಗೆ ಸಕಾಲವಲ್ಲ: ಶ್ವೇತಭವನ
ಲಾಸ್ ವೇಗಸ್‌ನಲ್ಲಿ ಬಂದೂಕುಧಾರಿಯೋರ್ವ ನಡೆಸಿದ ಹತ್ಯಾಕಾಂಡದ ಹಿನ್ನೆಲೆಯಲ್ಲಿ, ಬಂದೂಕು ನಿಯಂತ್ರಣ ನೀತಿಗಳ ಬಗ್ಗೆ ಚರ್ಚೆ ನಡೆಸಲು ಇದು ಸೂಕ್ತ ಸಮಯವಲ್ಲ ಎಂದು ಶ್ವೇತಭವನ ಸೋಮವಾರ ಅಭಿಪ್ರಾಯಪಟ್ಟಿದೆ.
‘‘ಇಂದು ಬದುಕುಳಿದವರನ್ನು ಸಂತೈಸುವ ಹಾಗೂ ನಮ್ಮನ್ನು ಬಿಟ್ಟುಹೋದವರಿಗಾಗಿ ಶೋಕಿಸುವ ದಿನ’’ ಎಂದು ಶ್ವೇತಭವನದ ವಕ್ತಾರೆ ಸಾರಾ ಸ್ಯಾಂಡರ್ಸ್ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.







