ಶನಯ್ಯ ಮಾಬೆನ್‌ಗೆ ‘ಬಿಗ್ ಸಿಂಗರ್ ಫಾರ್ ಜೆ’ ಪ್ರಶಸ್ತಿ

ಉಡುಪಿ, ಅ.3: ಬಿಗ್ ಜೆ ಟೆಲಿವಿಷನ್ ಮೀಡಿಯಾ ನೆಟ್‌ವರ್ಕ್ ವತಿಯಿಂದ ಆಯೋಜಿಸಲಾದ ‘ಬಿಗ್ ಸಿಂಗರ್ ಫಾರ್ ಜೆ’ ಕ್ರೈಸ್ತ ಭಕ್ತಿ ಸಂಗೀತ ಸ್ಪರ್ಧೆಯಲ್ಲಿ ಮಂಗಳೂರಿನ ಶನಯ್ಯ ಬಿ. ಮಾಬೆನ್ ಪ್ರಶಸ್ತಿ ಪಡೆದಿದ್ದಾರೆ.
ಉಡುಪಿ ಮಿಷನ್ ಕಂಪೌಂಡ್ ಬಳಿ ಬಾಶೆಲ್ ಮಿಷನ್ ಆಡಿಟೋರಿಯಂನಲ್ಲಿ ನಡೆದ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಶನಯ್ಯಗೆ ಉಡುಪಿ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ‘ಬಿಗ್ ಸಿಂಗರ್ ಫಾರ್ ಜೆ’ ಪ್ರಶಸ್ತಿ ಹಾಗೂ ಒಂದು ಲಕ್ಷ ರೂ. ನಗದು ಬಹು ಮಾನವನ್ನು ವಿತರಿಸಿದರು. ದ್ವಿತೀಯ ಬಹುಮಾನವನ್ನು ಮಂಗಳೂರಿನ ಆಗ್ನೇಸ್ ಜೇನ್ ಮತ್ತು ತೃತಿಯ ಬಹುಮಾನವನ್ನು ಮಣಿಪಾಲ ಅಕ್ಷಾ ಪಡೆದು ಕೊಂಡರು.
ಸಂಗೀತವನ್ನು ಆಲಿಸಲು ಭಾಷೆಗಳ ತೊಡಕು ಇಲ್ಲ. ಸಂಗೀತವೊಂದೆ ಧರ್ಮ ದೇಶ, ಸಂಸ್ಕೃತಿಯನ್ನು ಬೆಸೆಯುವ ಮತ್ತು ಒಗ್ಗೂಡಿಸುವ ಸಾಧನವಾಗಿದೆ. ಪರಸ್ಪರ ಜನರನ್ನು ಒಗ್ಗೂಡಿಸುವ ಕೆಲಸವನ್ನು ಸಂಗೀತದಿಂದ ಮಾತ್ರ ಮಾಡಲು ಸಾಧ್ಯ ಎಂದು ಧರ್ಮಾಧ್ಯಕ್ಷ ಡಾ.ಲೋಬೊ ನುಡಿದರು.
ಅಂತಿಮ ಸುತ್ತಿಗೆ ಆಯ್ಕೆಯಾದ 12 ಮಂದಿ ಸ್ಪರ್ಧಾಳುಗಳ ಪೈಕಿ 10 ಮಂದಿ ಸ್ಪರ್ಧಾಳುಗಳಾದ ರೀಮಾ ಪಾಂಡ್ಯ, ಆಗ್ನೇಸ್ ಜೇನ್, ಜನೀಷಾ ಡಿಸೋಜ, ಅಕ್ಷಾ, ಸುಸಾನ್ ಮೆಂಡೊನ್ಸಾ, ಶನಯ್ಯ ಬಿ.ಮಾಬೆನ್, ಲೀಝಾ, ಅಂಜೇಲಾ, ಸವಿನ್ ಕರ್ಕಡ, ಶರ್ವಿನ್ ತಮ್ಮ ಭಕ್ತಿಸಂಗೀತದ ಪ್ರದರ್ಶನ ನೀಡಿದರು.
ತೀರ್ಪುಗಾರರಾಗಿ ವಂ.ಡೆನಿಸ್ ಡೆಸಾ ಕುಂತಳನಗರ, ವಂ. ವಲೇರಿಯನ್ ಮೆಂಡೊನ್ಸಾ ಉಡುಪಿ, ಜಾನೆಟ್ ಸ್ನೇಹಲತಾ ಉಡುಪಿ, ಸಂಜಯ್ ಜಾನ್ ರೊಡ್ರಿಗಸ್ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಸಿಎಸ್‌ಐ ಸಭೆಯ ವಂ.ಸ್ಟೀವನ್ ಸವೋತ್ತಮ, ಫುಲ್ ಗೋಸ್ಪಲ್ ಅಸೋಸಿಯೇಶನ್ ಉಡುಪಿ ಜಿಲ್ಲಾಧ್ಯಕ್ಷ ಪಾಸ್ಟರ್ ಜೋಸೆಫ್ ಜಮಖಂಡಿ, ಕೊಳಲಗಿರಿ ಸಂತ ಅಂತೋನಿ ಸೀರಿಯನ್ ಓರ್ಥೊಡಕ್ಸ್ ಚರ್ಚಿನ ವಂ.ಲೋರೆನ್ಸ್ ಡೇವಿಡ್ ಕ್ರಾಸ್ತಾ, ಯುಬಿಎಂ ಡಿಸ್ಟ್ರಿಕ್ಟ್ ಚರ್ಚ್ ಬೋರ್ಡ್‌ನ ಜಯಪ್ರಕಾಶ್ ಸೈಮನ್ಸ್, ಮುಂಬೈ ಯುನೈಟೆಡ್ ಬಾಸೆಲ್ ಮಿಶನ್ ಚರ್ಚ್ ಕೌನ್ಸಿಲ್ ಅಧ್ಯಕ್ಷ ಸ್ಯಾಮ್ಸನ್ ಫ್ರ್ಯಾಂಕ್, ಬಿಗ್ ಜೆ ನೆಟ್ ವರ್ಕ್‌ನ ನಿರ್ದೇಶಕ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.







