ಪಾಲಿಕೆ ವ್ಯಾಪ್ತಿಯ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮಕ್ಕೆ ತುರವೇ ಆಗ್ರಹ

ಮಂಗಳೂರು, ಅ. 3: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು, ಕ್ರಮ ಕೈಗೊಳ್ಳದಿದ್ದಲ್ಲಿ ಪಾಲಿಕೆಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ 400ಕ್ಕೂ ಮಿಕ್ಕಿ ಅಕ್ರಮ ಕಟ್ಟಡಗಳಿದ್ದು, ಇಂತಹ ಕಟ್ಟಡಗಳು ನಿರ್ಮಾಣ ನಿಯಮಾವಳಿಗಳನ್ನು ಗಾಳಿಗೆ ತೂರಿದೆ. ಬಿಜೈ ವ್ಯಾಪ್ತಿಯ ಕೊಡಿಯಾಲ್‌ಬೈಲ್ ಗ್ರಾಮದಲ್ಲಿನ ಕಟ್ಟಡವೊಂದರ ಒಂದನೆ ಅಂತಸ್ತಿನಲ್ಲಿ ಪಾಲಿಕೆ ಪರವಾನಿಗೆ ಇಲ್ಲದೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಏಕ ನಿವೇಶನ ಒಪ್ಪಿಗೆ ಪಡೆಯದೆ ಕಾಮಗಾರಿ ನಡೆಯುತ್ತಿದೆ. ಅನಧಿಕೃತ ಕಟ್ಟಡದ ಕಾಮಗಾರಿಯನ್ನು ಸಂಪೂರ್ಣವಾಗಿ ನಿಲ್ಲಿಸುವಲ್ಲಿ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿದರು.
ಚಿಕ್ಕ ಮನೆ ಕಟ್ಟಿಕೊಂಡವರಿಗೆ, ಅಂಗಡಿಗಳಿಗೆ ನೋಟಿಸ್ ಜಾರಿ ಮಾಡುವ ಪಾಲಿಕೆಗೆ ಇಂತಹ ಅಕ್ರಮಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಈ ಬಗ್ಗೆ ತುರವೇ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಯೋಗೀಶ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಕೋಶಾಧಿಕಾರಿ ಅಬ್ದುರ್ರಶೀದ್ ಜಪ್ಪು, ಸಂಘಟನಾ ಕಾರ್ಯದರ್ಶಿ ಆನಂದ ಅಮೀನ್ ಅಡ್ಯಾರ್, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿರಾಜ್ ಅಡ್ಕರೆ, ದ.ಕ. ಜಿಲ್ಲಾ ಯುವ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಶಕ್ತಿನಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಬಂಗೇರ ಕುಡುಪು ಮೊದಲಾದವರು ಉಪಸ್ಥಿತರಿದ್ದರು.







